

ಶಿವಮೊಗ್ಗ: ಸಮಯ ಪಾಲನೆ ಮಾಡುವವರಿಗೆ ಬದುಕಿನಲ್ಲಿ ಯಶಸ್ಸು ನಿಶ್ಚಿತ. ಹೀಗಾಗಿ ವಿದ್ಯಾರ್ಥಿಗಳು ಸಮಯದ ಮಹತ್ವ ಅರಿತು ಬದುಕು ಮುನ್ನಡೆಸಬೇಕು ಎಂದು ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಹೇಳಿದರು.
ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಬುಧವಾರ ಏರ್ಪಡಿಸಿದ್ದ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್ ಘಟಕಗಳ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿ, ನಾನು ಓದಿಗಾಗಿ ಯಾವ ಕಾಲೇಜಿನ ಮೆಟ್ಟಿಲು ಹತ್ತಿಲ್ಲ, ಯಾವ ವಿವಿಗೂ ಹೋಗಿಲ್ಲ. ಆದರೆ ನನ್ನೊಳಗಿನ ಕಲೆ ಎಲ್ಲೆಡೆ ಮಾನ್ಯವಾಗಿದೆ. ಆದ್ದರಿಂದಲೇ ಗೌರವ ಡಾಕ್ಟರೇಟ್, ಪದ್ಮಶ್ರೀ ಲಭಿಸಿದೆ ಎಂದರು.
ಇಡ್ಲಿ ಮಾರಿ ಜೀವನ ಸಾಗಿಸಿದ ನಾನು ಜೀವನವನ್ನು ಸಂಪೂರ್ಣ ಅರ್ಥ ಮಾಡಿಕೊಂಡಿದ್ದೇನೆ. ನನ್ನ ಗುರು ಕಾಳವ್ವ ಜೋಗತಿಯಿಂದ ನಾನು ಈ ಮಟ್ಟಕ್ಕೆ ಬೆಳೆಯಲು ಕಾರಣವಾಯಿತು. ಜೀವನದಲ್ಲಿ ಯಾವುದಕ್ಕೂ ಅಂಜಿಕೊಳ್ಳಬಾರದು. ಒಳ್ಳೆಯವರ ಸಹವಾಸ ಮಾಡಬೇಕು. ಕೆಟ್ಟವರಿಂದ, ಕೆಟ್ಟ ಯೋಚನೆಯಿಂದ ದೂರ ಉಳಿಯಬೇಕು ಎಂದು ಸಲಹೆ ನೀಡಿದರು.
ಮೊಬೈಲ್ ನಿಮ್ಮನ್ನು ತಲೆತಗ್ಗಿಸುವಂತೆ ಮಾಡುತ್ತದೆ. ಆದರೆ ಪುಸ್ತಕ ಜೀವನದಲ್ಲಿ ತಲೆ ಎತ್ತುವಂತೆ ಮಾಡುತ್ತದೆ. ದೇವರು ದೇವಸ್ಥಾನಗಳಲ್ಲಿಲ್ಲ, ನಾವು ಮಾಡುವ ಕರ್ತವ್ಯದಲ್ಲಿದ್ದಾನೆ. ಎಲ್ಲರ ಆಂತರ್ಯದಲ್ಲೂ ಪರಮಾತ್ಮನಿದ್ದಾನೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು ಮಾತನಾಡಿ, ಖಾಸಗಿ ಶಾಲೆಯಲ್ಲಿ ಓದಿದರೆ ಮಾತ್ರ ಜೀವನದಲ್ಲಿ ಉತ್ತಮ ಸಾಧನೆ ಮಾಡಬಹುದೆಂಬುದು ಭ್ರಮೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲೂ ಪ್ರತಿಭಾವಂತರಿದ್ದಾರೆ. ಪಠ್ಯೇತರ ಚಟುವಟಿಕೆಗಳ ಜತೆಗೆ ಮೌಲ್ಯಾಧಾರಿತ ಬದುಕಿನ ದಾರಿಯಲ್ಲಿ ಸಾಗಬೇಕು. ಆಗ ಮಾತ್ರ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯವಿದೆ ಎಂದರು.
ಕಾಲೇಜು ಶಿಕಣ ಇಲಾಖೆಯ ಪ್ರಾದೇಶಿಕ ಕಚೇರಿ ಜಂಟಿ ನಿರ್ದೇಶಕ ಪ್ರೊ. ವಿಷ್ಣುಮೂರ್ತಿ ಮಾತನಾಡಿ, ಯವಜನತೆ ಉತ್ತಮ ದೇಹಬಲದ ಜತೆಗೆ ಮನೋಬಲ ಹೊಂದಿರಬೇಕು. ನೈತಿಕ ಮತ್ತು ಪ್ರಾಮಾಣಿಕ ಹಾದಿಯಲ್ಲಿ ಸಾಗುವುದರಿಂದ ಉತ್ತಮ ನಾಳೆಗಳು ನಿಮ್ಮದಾಗುತ್ತವೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅಂತಾರಾಷ್ಟ್ರೀಯ ಕ್ರೀಡಾಪಟು, ಏಕಲವ್ಯ ಪ್ರಶಸ್ತಿ ವಿಜೇತ ಮುನೀರ್ ಬಾಷಾ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಪ್ರೊ. ಬಿ.ಜಿ.ಚನ್ನಪ್ಪ, ಕಾಲೇಜಿನ ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ. ಸಕ್ರೀನಾಯ್ಕ, ಡಾ. ಎಸ್.ಎಚ್.ಪ್ರಸನ್ನ, ಜಯಕಿರ್ತಿ, ಡಾ. ರೇಷ್ಮಾ, ಡಾ. ಸೋಮಶೇಖರ್, ಡಾ. ಚಂದ್ರಶೇಖರ್ ಇತರರಿದ್ದರು.