ಸಮಯ ಪಾಲಿಸದ ಜಡ್ಜ್‌ಗಳು: ಸಿಜೆಗೆ ವಕೀಲರ ಸಂಘದಿಂದ ಮನವಿ ಸಲ್ಲಿಕೆ

highcourt
Published on

ಬೆಂಗಳೂರು: ನ್ಯಾಯಾಲಯದಲ್ಲಿ ರಿಟ್ ಮೇಲ್ಮನವಿ ಅರ್ಜಿ ವಿಚಾರಣೆ, ಪ್ರಕರಣ ನಿಗದಿ, ಮೆಮೊ ಸ್ವೀಕರಿಸುವಲ್ಲಿ ವಿಳಂಬ ಹಾಗೂ ಕೆಲವು ಪೀಠಗಳು ಸಮಯ ಪಾಲನೆಯಲ್ಲಿ ತೋರುತ್ತಿರುವ ನಿರ್ಲಕ್ಷ್ಯದ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರಿಗೆ ಬೆಂಗಳೂರು ವಕೀಲರ ಸಂಘ ಬೇಡಿಕೆಯಿಟ್ಟಿದೆ.

ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ.ಜಿ ರವಿ ಮತ್ತು ಖಜಾಂಚಿ ಎಂ. ಟಿ ಹರೀಶ್ ಅವರ ಲಿಖಿತ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ ಅಂಜಾರಿಯಾ ಅವರಿಗೆ ಇತ್ತೀಚೆಗೆ ಸಲ್ಲಿಸಲಾಗಿದೆ.

ಹೊಸ ರಿಟ್ ಮೇಲ್ಮನವಿಗಳು ಮತ್ತು ಹಸಿರು ಪೀಠದಲ್ಲಿ ವಿಚಾರಣೆಗೆ ಬರಬೇಕಾದ ಪ್ರಕರಣಗಳ ಆಲಿಕೆ ನಡೆಯುತ್ತಿಲ್ಲ. ಇನ್ನು ಕೆಲವು ಏಕಸದಸ್ಯ ಪೀಠಗಳು ಮಂದಗತಿಯ ವಿಚಾರಣೆ ಮೂಲಕ ಕೋರ್ಟ್‌ನ ಅಮೂಲ್ಯ ಸಮಯವನ್ನು ವ್ಯಯ ಮಾಡುತ್ತಿದೆ. ಇದರಿಂದ ಕಕ್ಷಿದಾರರಿಗೆ ಸಿಗಬೇಕಾದ ನ್ಯಾಯದಾನದಲ್ಲಿ ವಿಳಂಬವಾಗುತ್ತಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಪ್ರಕರಣಗಳನ್ನು ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿ ಸಲ್ಲಿಸಲಾಗುವ ಜ್ಞಾಪನಾ ಪತ್ರಗಳನ್ನು (ಮೆಮೊ) ಪರಿಗಣಿಸಲಾಗುತ್ತಿಲ್ಲ. ಈ ಸಂಬಂಧ ಕಚೇರಿ ಮತ್ತು ರಿಜಿಸ್ಟ್ರಿ ನಿಷ್ಕ್ರಿಯತೆ ಸ್ಪಷ್ಟವಾಗಿ ತಿಳಿದು ಬರುತ್ತಿದೆ. ಎಷ್ಟೋ ಬಾರಿ ಹತ್ತಾರು ಬಾರಿ ಮೆಮೊ ಸಲ್ಲಿಸಿದರೂ ಪ್ರಕರಣಗಳನ್ನು ಪಟ್ಟಿ ಮಾಡಲಾಗುತ್ತಿಲ್ಲ. ಇದರಿಂದ ವಕೀಲರು ಮತ್ತು ಸಹಾಯಕರು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಆಕ್ಷೇಪಿಸಲಾಗಿದೆ.

ಕೋರ್ಟ್ ಹಾಲ್ 1 ಸೇರಿದಂತೆ ಇನ್ನಿತರ ಪೀಠಗಳಲ್ಲಿ ವಿಚಾರಣೆಗೆ ನಿಗದಿಗೊಳ್ಳುವ ದಿನದ ಪಟ್ಟಿಯಲ್ಲಿನ ಪ್ರಕರಣಗಳು ದಿನದ ಕಲಾಪದ ಅಂತ್ಯಕ್ಕೆ ವಿಚಾರಣೆಗೆ ತಲುಪುವುದೇ ಇಲ್ಲ. ಅಷ್ಟೇ ಅಲ್ಲ, ಆ ರೀತಿ ಪಟ್ಟಿಯಲ್ಲಿ ಉಳಿಯುವ ಪ್ರಕರಣಗಳಿಗೆ ಕೆಲವು ಪೀಠಗಳು ದೀರ್ಘವಾದ ದಿನಾಂಕ ನೀಡುತ್ತಿರುವುದು ಆಘಾತಕಾರಿ ಎಂದು ಪತ್ರದಲ್ಲಿ ದೂರಲಾಗಿದೆ.

ಹೈಕೋರ್ಟ್ ಕಲಾಪ ನಿರ್ವಹಿಸುವ ದಿನಗಳಲ್ಲಿ ಬೆಳಿಗ್ಗೆ 10.30ಕ್ಕೆ ಕಲಾಪ ಆರಂಭವಾಗಬೇಕು. ಆದರೆ, ಕೆಲವು ಪೀಠಗಳು ತಡವಾಗಿ ಆರಂಭವಾಗುತ್ತಿವೆ. ಇಂತಹ ಪೀಠಗಳಲ್ಲಿನ ನ್ಯಾಯಮೂರ್ತಿಗಳ ಬಗ್ಗೆ ತಾವು ಖಡ್ಡಾಯವಾಗಿ ಗಮನಹರಿಸಬೇಕು . ಇದರಿಂದ ಸಮಸ್ತ ವಕೀಲ ಸಮೂಹ ಸಾಕಷ್ಟು ತೊಂದರೆ ಅನುಭವಿಸುತ್ತಿದೆ. ಇಂತಹ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸುವ ಬಗ್ಗೆ ತಾವು ಗಮನ ಹರಿಸಬೇಕು. ತ್ವರಿತ ಮತ್ತು ಚುರುಕು ಕಾರ್ಯನಿರ್ವಹಣೆ ಎಲ್ಲಿ ಅಗತ್ಯವಿದೆಯೊ ಅದು ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಬೇಕು ಎಂದು ಎಎಬಿ ಮನವಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net