

ವಿಟ್ಲ: ಸುಬ್ರಹ್ಮಣ್ಯ-ಮಂಜೇಶ್ವರ ಅಂತರ್ ರಾಜ್ಯ ಹೆದ್ದಾರಿಯನ್ನು ಜಿಲ್ಲಾಧಿಕಾರಿಗಳ ಆದೇಶವಿಲ್ಲದೆ ಪುಣಚ ಪೇಟೆಯಲ್ಲಿ ಬ್ಲಾಕ್ ಮಾಡಿ ಕಚ್ಚಾ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿದ ಪರಿಣಾಮ ಹಲವು ದ್ವಿಚಕ್ರ ವಾಹನ ಸವಾರರು ಬೀಳುವಂತಾಗಿದೆ.
ಅಂತರ್ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ನಿರ್ಬಧಿಸುವ ಹಾಗೂ ಪರ್ಯಾಯ ರಸ್ತೆಯನ್ನು ಸೂಚಿಸುವ ಕೆಲಸವನ್ನು ಜಿಲ್ಲಾಧಿಕಾರಿ ಮಾಡಬೇಕು. ಇದಕ್ಕಾಗಿ ಸೂಕ್ತ ಕಾರಣಗಳನ್ನು ಜಿಲ್ಲಾಡಳಿತಕ್ಕೆ ನೀಡುವ ಕೆಲಸ ಸ್ಥಳೀಯಾಡಳಿತ ಮಾಡಬೇಕಾಗಿದೆ. ರಸ್ತೆ ಬದಲಾವಣೆಯ ಆದೇಶವನ್ನು ಮಾಡದೆ ರಸ್ತೆಯನ್ನು ಬ್ಲಾಕ್ ಮಾಡಿರುವುದರಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೆಲವು ವರ್ಷಗಳಿಂದ ಈ ರೀತಿ ನಡೆಯುತ್ತಿದ್ದರೂ ಕ್ರಮ ಕೈಗೊಳ್ಳುವ ಕೆಲಸಕ್ಕೆ ಇಲಾಖೆಗಳು ಹೋಗಿಲ್ಲ.
ಸಂಗೀತ ಕಾರ್ಯಕ್ರಮ ಮಾಡುವ ಉದ್ದೇಶದಿಂದ ಪೇಟೆಯ ರಸ್ತೆಯ ಮಧ್ಯಭಾಗದಲ್ಲಿ ವೇದಿಕೆಯನ್ನು ಶನಿವಾರ ಬೆಳಗ್ಗಿನಿಂದ ಅಳವಡಿಸಲಾಗುತ್ತಿದ್ದು, ಮಧ್ಯಾಹ್ನದ ಬಳಿಕ ವಾಹನ ಸಂಚಾರವನ್ನು ಬ್ಯಾರಿಕೇಡ್ ಅಳವಡಿಸಿ ನಿಷೇಽಸಲಾಗಿದೆ. ವಾಹನ ಸಂಚಾರಕ್ಕೆ ಪಕ್ಕದ ತೆಂಗಿನ ತೋಟದ ಮಧ್ಯದಲ್ಲಿ ಮಾಡಿದ್ದು, ಮಳೆಯ ಕಾರಣದಿಂದ ಕೆಸರಾಗಿ ವಾಹನಗಳು ಸಂಚಾರಕ್ಕೆ ಸಮಸ್ಯೆ ಪಡುವಂತಾಗಿದೆ. ರಸ್ತೆಯಲ್ಲಿ ಮಾಡುವ ಕಾರ್ಯಕ್ರಮವನ್ನು ಆ ಪ್ರದೇಶದಲ್ಲಿ ಮಾಡಬಹುದಲ್ಲಾ ಎಂಬ ಪ್ರಶ್ನೆ ವಾಹನ ಸವಾರರದ್ದಾಗಿದೆ.
ವಿಜಯ ದಶಮಿ ರಜೆ ಇರುವ ಕಾರಣದಿಂದ ಇಲಾಖೆಯ ಅಧಿಕಾರಿಗಳು ಯಾರೂ ಇತ್ತ ಸುಳಿಯುವುದಿಲ್ಲ ಎಂಬ ಕಾರಣದಿಂದ ಈ ರೀತಿಯಲ್ಲಿ ರಸ್ತೆ ಬ್ಲಾಕ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಲೊಕೋಪಯೋಗಿ ಇಲಾಖೆ ಹಾಗೂ ಕಂದಾಯ ಇಲಾಖೆಯ ಪ್ರಕಾರ ಯಾವುದೇ ಮಾರ್ಗ ಬದಲಾವಣೆಯ ಆದೇಶವನ್ನು ಜಿಲ್ಲಾಽಕಾರಿಗಳು ಹೊರಡಿಸಿಲ್ಲ.