

ಬೆಂಗಳೂರು: ಪ್ರಸಕ್ತ ವರ್ಷದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಜ.19ರಂದು ನಡೆಯಲಿದ್ದು, ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಆರೋಗ್ಯ ಇಲಾಖೆ ಮತ್ತು ಸಮುದಾಯದ ನಡುವೆ ಆಶಾ ಕಾರ್ಯಕರ್ತೆಯರು ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಾರೆ. ಆದರೆ, ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರಕ್ಕೆ ಕರೆ ನೀಡಿದ್ದು, ಬಹುತೇಕ ಕಾರ್ಯಕರ್ತೆಯರು ಪಾಲ್ಗೊಂಡಿದ್ದಾರೆ. ಶೇ. 70 ಕಾರ್ಯಕರ್ತೆಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ದರಿಂದ ಪಲ್ಸ್ ಪೋಲಿಯೋ ಅಭಿಯಾನದಲ್ಲಿ ಮೊದಲು ಅನುಸರಿಸುತ್ತಿದ್ದ ಮಾರ್ಗವನ್ನೇ ಅನುಸರಿಸಲು ಇಲಾಖೆ ತೀರ್ವನಿಸಿದೆ. ವೈದ್ಯಕೀಯ ಕಾಲೇಜು, ಆರೋಗ್ಯ ಇಲಾಖೆ ಸಿಬ್ಬಂದಿ, ಶುಶ್ರೂಷಕರು ಮತ್ತು ಅರೆ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳು, ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳನ್ನು ಬಳಸಿಕೊಳ್ಳಲು ಇಲಾಖೆ ನಿರ್ಧರಿಸಿದೆ. ಅದಾಗಿಯೂ ಮುಷ್ಕರನಿರತ ಕಾರ್ಯಕರ್ತೆಯರ ಮನವೊಲಿಸುವ ಪ್ರಯತ್ನ ಸಾಗಿದೆ.
ಆಶಾ ಕಾರ್ಯಕರ್ತೆಯರ ಮುಷ್ಕರದಿಂದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಅಡಚಣೆ ಆಗುವುದಿಲ್ಲ. ಸಾರ್ವಜನಿಕರು ಆತಂಕಕ್ಕೆ ಒಳಗಾಗದೆ ಜ. 19ರಂದು ಮಕ್ಕಳಿಗೆ ಲಸಿಕೆ ಹಾಕಿಸಬಹುದು ಎಂದು ಇಲಾಖೆ ತಿಳಿಸಿದೆ.