

ಕಡೂರು: ಕನಕರಾಯನಗುಡ್ಡದ ಕನಕರಾಯಸ್ವಾಮಿ ದೇವಸ್ಥಾನ ನೆಮ್ಮದಿಯ ತಾಣ ಎಂದು ಉತ್ತರಾದಿಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ತಿಳಿಸಿದರು.
ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿ ಕನಕರಾಯಸ್ವಾಮಿಗೆ ಚಾತುರ್ಮಾಸ್ಯ ಆರಂಭಪೂರ್ವ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ಅಜ್ಞಾತವಾಗಿದ್ದ ಕನಕರಾಯಸ್ವಾಮಿ ದೇವಸ್ಥಾನ ಭಕ್ತರ ಶ್ರಮದಿಂದ ಹೊಸರೂಪ ಪಡೆಯುತ್ತಿದೆ. ಕನಕದಾಸರ ಕರೆಗೆ ಒಲಿದುಬಂದ ಗೋವಿಂದ ಇಲ್ಲಿ ಕನಕರಾಯನಾಗಿದ್ದಾನೆ. ಇಲ್ಲಿನ ಯುವಕರ ಶ್ರಮ ಸಾರ್ಥಕ್ಯ ಕಂಡಿದೆ ಎಂದರು.
ಚಾತುರ್ಮಾಸ್ಯ ಆರಂಭಕ್ಕೆ ಮುನ್ನ ಕನಕರಾಯಸ್ವಾಮಿಗೆ ಪೂಜೆ ಸಲ್ಲಿಸಿ ಸಂಕಲ್ಪ ಮಾಡಿದ್ದೇವೆ. ಹೊಳೆಹೊನ್ನೂರಿನಲ್ಲಿ 28ನೇ ಚಾತುರ್ಮಾಸ್ಯ ವ್ರತ ಕೈಗೊಳ್ಳಲಿದ್ದೇವೆ. ಸರ್ವರಿಗೂ ಸುಖ ಶಾಂತಿ ದೊರೆಯಲಿ. ಒಳ್ಳೆಯ ಮಳೆ-ಬೆಳೆಯಾಗಿ ರೈತರು ನೆಮ್ಮದಿಯಿಂದ ಬದುಕುವಂತಾಗಲಿ ಎಂದು ಹಾರೈಸಿದರು.
ಚಿಕ್ಕಮಗಳೂರು ಉತ್ತರಾದಿ ಮಠದ ಅಧಿಕಾರಿ ಕೋಟೆ ಮಧುಸೂದನಾಚಾರ್ಯ, ಶಶಿಧರಾಚಾರ್ಯ, ರಮೇಶಾಚಾರ್ಯ, ಚೇತನ್ ಕೆಂಪರಾಜು, ಕಿರಣ್ ಕಲ್ಲಯ್ಯ, ಶ್ರೀಧರ್ ಇತರರಿದ್ದರು.