ಚಂದ್ರಯಾನ-3 ಯೋಜನೆ ಯಶಸ್ವಿಗೆ ಶಿವಮೊಗ್ಗದಲ್ಲಿ ಪೂಜೆ ಪುನಸ್ಕಾರ

palike members puje in temple
ಮಹಾನಗರ ಪಾಲಿಕೆ ಆವರಣದಲ್ಲಿ ವರಪ್ರದ ಶ್ರೀ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಎಸ್.ಶಿವಕುಮಾರ್, ಲಕ್ಷ್ಮೀ ಶಂಕರನಾಯ್ಕ, ಎಸ್.ಜ್ಞಾನೇಶ್ವರ್, ಸುವರ್ಣಾ ಶಂಕರ್, ವಿಶ್ವನಾಥ, ಆರತಿ ಪ್ರಕಾಶ್, ಪ್ರಭಾಕರ್, ಮಂಜುನಾಥ ಇದ್ದರು.
Published on

ಶಿವಮೊಗ್ಗ: ಇಸ್ರೋದ ಚಂದ್ರಯಾನ-3 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯಲಿ(ಲ್ಯಾಂಡಿಂಗ್) ಆಗಲೆಂದು ಬುಧವಾರ ಜಿಲ್ಲಾದ್ಯಂತ ಜನರು ಹಾರೈಸಿ ವಿವಿಧೆಡೆ ಪೂಜೆ ಪುನಸ್ಕಾರಗಳನ್ನು ನಡೆಸಿದರು. ದೇವಸ್ಥಾನ, ಮಸೀದಿ, ಚರ್ಚ್, ಶಾಲಾ-ಕಾಲೇಜು ಒಳಗೊಂಡಂತೆ ಹಲವು ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳ ಕಚೇರಿಗಳಲ್ಲೂ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು.

ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ದುರ್ಗಾ ಸಪ್ತಶತಿ ಪಾರಾಯಣ, ಚಂಡಿಕಾ ಹೋಮ ನಡೆಯಿತು. ಸಾಗರದ ಶಿವಪ್ಪ ನಾಯಕ ವೃತ್ತದಲ್ಲಿರುವ ಹಜರತ್ ಸೈಯದ್ ರಾಜ್ ಬಕ್ಸ್ ವಲಿ ಅಲ್ಲಾಹ್ ದರ್ಗಾದಲ್ಲಿ ಮುಸ್ಲಿಮರು ವಿಶೇಷ ಪ್ರಾರ್ಥನೆ ಮಾಡಿದರು. ಪುರಾಣ ಪ್ರಸಿದ್ಧ ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಪೂಜೆ ನಡೆಸಲಾಯಿತು. ಉಳಿದಂತೆ ಶಿವಮೊಗ್ಗ ಮಹಾನಗರ ಪಾಲಿಕೆ ಆವರಣದ ವರಪ್ರದ ಶ್ರೀ ವಿನಾಯಕ ದೇವಸ್ಥಾನ, ಶಿವಗಂಗಾ ಯೋಗ ಕೇಂದ್ರ, ವಾಸವಿ ವಿದ್ಯಾಕೇಂದ್ರ, ಪ್ರಿಯದರ್ಶನಿ ಆಂಗ್ಲ ಮಾಧ್ಯಮ ಶಾಲೆ ಸೇರಿದಂತೆ ನಾನಾ ಕಡೆಗಳಲ್ಲಿ ಚಂದ್ರಯಾನ-3 ಯೋಜನೆ ಯಶಸ್ವಿ ಶುಭ ಕೋರಿದರು.
ಮಹಾನಗರ ಪಾಲಿಕೆ ಆವರಣದಲ್ಲಿ ವರಪ್ರದ ಶ್ರೀ ವಿನಾಯಕ ದೇವಸ್ಥಾನದಲ್ಲಿ ಮೇಯರ್ ಎಸ್.ಶಿವಕುಮಾರ್ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಉಪ ಮೇಯರ್ ಲಕ್ಷ್ಮೀ ಶಂಕರನಾಯ್ಕ, ಸದಸ್ಯರಾದ ಎಸ್.ಜ್ಞಾನೇಶ್ವರ್, ಸುವರ್ಣಾ ಶಂಕರ್, ವಿಶ್ವನಾಥ, ಆರತಿ ಪ್ರಕಾಶ್, ಪ್ರಭಾಕರ್, ಮಂಜುನಾಥ ಸೇರಿದಂತೆ ಸಿಬ್ಬಂದಿ ಸೇರಿ ಹಲವರು ಇದ್ದರು.
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ ಮತ್ತು ಸಮಾಜ ಸೇವಕ ಲಯನ್ಸ್ ಪಾಂಡುರಂಗಪ್ಪ ನೇತೃತ್ವದಲ್ಲಿ ಪುರಾಣ ಪ್ರಸಿದ್ಧ ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಯಶಸ್ವಿ ಚಂದ್ರಯಾನ ಲ್ಯಾಂಡಿಂಗ್‌ಗೆ ಪ್ರಾರ್ಥನೆ ಸಲ್ಲಿಸಿದರು. ಸಂದರ್ಭದಲ್ಲಿ ಅನೇಕ ದೇಶಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net