ಪುಡಾರಿಗಳೇ ಎಚ್ಚರ.. ಬಾಲ ಬಿಚ್ಚಿದರೆ ಕ್ಷಣಮಾತ್ರದಲ್ಲಿ ಚೆನ್ನಮ್ಮ ಪಡೆ ಹಾಜರು

channamma pade
ಕಮಲಾ ನೆಹರು ಮಹಿಳಾ ಕಾಲೇಜಿನಲ್ಲಿ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಚೆನ್ನಮ್ಮ ಪಡೆಗೆ ಚಾಲನೆ ನೀಡಿದರು. ಎಚ್.ಎಸ್.ನಾಗಭೂಷಣ್, ವೆಂಕಟೇಶ್, ಅನಿಲ್‌ಕುಮಾರ್ ಭೂಮರಡ್ಡಿ, ಎ.ಜಿ.ಕಾರ್ಯಪ್ಪ, ಪ್ರಕಾಶ್, ಬಾಬು ಆಂಜನಪ್ಪ, ಎಂ.ಸುರೇಶ್, ವಿನೋದ್ ಇದ್ದರು.
Published on

ಶಿವಮೊಗ್ಗ: ಪುಡಾರಿಗಳೇ ಎಚ್ಚರ.. ಶಿವಮೊಗ್ಗ ಜಿಲ್ಲೆಯಲ್ಲಿ ಇನ್ಮುಂದೆ ಬಾಲ ಬಿಚ್ಚಿದರೆ ಕ್ಷಣಮಾತ್ರದಲ್ಲಿ ಚೆನ್ನಮ್ಮ ಪಡೆ ಹಾಜರಾಗಲಿದೆ.

ಹೌದು, ಮಹಿಳೆಯರು, ಯುವತಿಯರು, ವಿದ್ಯಾರ್ಥಿನಿಯರು, ಮಕ್ಕಳ ಮೇಲೆ ದೌರ್ಜನ್ಯ ಮಾಡುವುದು, ಅಸಭ್ಯವಾಗಿ ವರ್ತಿಸುವುದು ಕಂಡುಬಂದಲ್ಲಿ ಅಲ್ಲಿಗೆ ಖುದ್ದು ಚೆನ್ನಮ್ಮ ಪಡೆ ಆಗಮಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಿದೆ.
ಜಿಲ್ಲೆಯಲ್ಲಿ ವಿಶೇಷವಾಗಿ ವಿದ್ಯಾರ್ಥಿನಿಯರ ರಕ್ಷಣೆಗೆ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು, ಅಸಭ್ಯವಾಗಿ ವರ್ತಿಸುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಸಲುವಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಸಮುದಾಯದತ್ತ ಪೊಲೀಸ್ ಭಾಗವಾಗಿ ಚೆನ್ನಮ್ಮ ಪಡೆ ರಚಿಸಿದೆ.
ಚೆನ್ನಮ್ಮ ಪಡೆಯ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಮಫ್ತಿಯಲ್ಲಿ ಬಸ್ ನಿಲ್ದಾಣ, ಶಾಲಾ ಕಾಲೇಜು, ಪಾರ್ಕ್‌ಗಳ ಹತ್ತಿರ ಗಸ್ತಿಗೆ ನೇಮಕ ಮಾಡಲಿದೆ. ಮಫ್ತಿಯಲ್ಲಿ ಗಸ್ತು ಮಾಡಿ ಹೆಣ್ಣು ಮಕ್ಕಳಿಗೆ ತೊಂದರೆ ಕೊಡುವವರು ಕಂಡುಬಂದಲ್ಲಿ ಅಂತಹವರ ಮೇಲೆ ಕೂಡಲೇ ಕ್ರಮ ಕೈಗೊಳ್ಳಲಿದೆ.
ಚೆನ್ನಮ್ಮ ಪಡೆಯ ಅಧಿಕಾರಿ ಸಿಬ್ಬಂದಿ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿನಿಯರಿಗೆ ಮಹಿಳಾ ಮತ್ತು ಮಕ್ಕಳ ಕಾನೂನಿನ ಬಗ್ಗೆ ಹಾಗೂ ಕಾನೂನಿನಲ್ಲಿ ಅವರಿಗಿರುವ ರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ. ಜತೆಗೆ ಯಾವುದೇ ತುರ್ತು ಸಂದರ್ಭದಲ್ಲಿ ಸ್ವಯಂ ರಕ್ಷಣೆಗಾಗಿ, ಕರಾಟೆ ಅಥವಾ ಬೇಸಿಕ್ ಸ್ವಯಂರಕ್ಷಣೆ ತಂತ್ರಗಳ ಬಗ್ಗೆ ತರಬೇತಿಯನ್ನೂ ನೀಡಲಿದೆ.

ಕಮಲಾ ನೆಹರು ಕಾಲೇಜಿನಲ್ಲಿ ಚಾಲನೆ
ವಿದ್ಯಾರ್ಥಿನಿಯರ ಸುರಕ್ಷತೆ ಮತ್ತು ರಕ್ಷಣೆ ಉದ್ದೇಶದಿಂದ ರಚಿಸಿರುವ ಚೆನ್ನಮ್ಮ ಪಡೆಗೆ ಸೋಮವಾರ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ನಗರದ ಕಮಲಾ ನೆಹರೂ ಕಾಲೇಜಿನಲ್ಲಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿನಿಯರ ಜೀವನ ರೂಪಿಸುವಲ್ಲಿ ಮತ್ತು ಸರ್ವತೋಮುಖ ಅಭಿವೃದ್ಧಿಯಲ್ಲಿ ಶಿಕ್ಷಣವೇ ಪ್ರಮುಖ ಸಾಧನ. ಶಿಕ್ಷಣದಿಂದ ಮಾತ್ರ ಸಾಮಾಜಿಕ ಮತ್ತು ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಾಧ್ಯ. ಯಾವುದೇ ಕಾರಣಕ್ಕೂ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗಬಾರದು ಎಂದರು. ಕಮಲಾ ನೆಹರು ಸ್ಮಾಕರ ರಾಷ್ಟ್ರೀಯ ಮಹಿಳಾ ಕಾಲೇಜಿನ ಪ್ರಾಚಾರ್ಯ ಎಚ್.ಎಸ್.ನಾಗಭೂಷಣ್, ಕಸ್ತೂರ್ ಬಾ ಮಹಿಳಾ ಕಾಲೇಜಿನ ಪ್ರಾಚಾರ್ಯ ವೆಂಕಟೇಶ್, ಎಸ್ಪಿಗಳಾದ ಅನಿಲ್‌ಕುಮಾರ್ ಭೂಮರಡ್ಡಿ, ಎ.ಜಿ.ಕಾರ್ಯಪ್ಪ, ಡಿವೈಎಸ್ಪಿಗಳಾದ ಪ್ರಕಾಶ್, ಬಾಬು ಆಂಜನಪ್ಪ, ಎಂ.ಸುರೇಶ್, ಕರಾಟೆ ತರಬೇತುದಾರ ವಿನೋದ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net