

ಬಾಳೆಹೊನ್ನೂರು: ಪ್ರತಿ ಶನಿವಾರ ಜಿಲ್ಲೆಯ ಒಂದು ಪೊಲೀಸ್ ಠಾಣೆಯಲ್ಲಿ ಜನಸಂಪರ್ಕ ಸಭೆ ನಡೆಸಿ ಜನರಿಂದ ಅಹವಾಲು ಸ್ವೀಕರಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ ಅಮಟೆ ಹೇಳಿದರು.
ಪಟ್ಟಣದ ಠಾಣೆಯಲ್ಲಿ ಗುರುವಾರ ನಡೆದ ಕೊಪ್ಪ ಉಪವಿಭಾಗದ ಪೊಲೀಸ್ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯನ್ನು ಸಂಪೂರ್ಣ ಜನಸ್ನೇಹಿಯಾಗಿ ಮಾಡುವ ಉದ್ದೇಶವಿದೆ. ಹಾಗಾಗಿ ಜನಸಂಪರ್ಕ ಸಭೆ ನಡೆಸಿ ಜನರ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಲಾಗುವುದು. ಗ್ರಾಮೀಣ ಭಾಗಗಳಲ್ಲಿ ಹಳ್ಳಿಗಳಿಗೆ ತೆರಳಿ ಜನಸಂಪರ್ಕ ಸಭೆ ಮಾಡಲಾಗುವುದು. ಈ ಬಗ್ಗೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಠಾಣೆಯಲ್ಲಿ ಇಂದು ಕೊಪ್ಪ ಉಪವಿಭಾಗದ ಅಧಿಕಾರಿಗಳ ಸಭೆ ನಡೆಸಿ, ಮುಂಬರುವ ಗೌರಿ ಗಣೇಶ ಹಬ್ಬ, ಈದ್ ಮಿಲಾದ್ ಸಂದರ್ಭ ಕೈಗೊಳ್ಳಬೇಕಾದ ಬಂದೋಬಸ್ತ್ ಕ್ರಮಗಳ ಕುರಿತು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಭಾಗದ ಸಮಸ್ಯೆಗಳ ಕುರಿತು ಅಧಿಕಾರಿಗಳಿಂದ ಸಮಾಲೋಚನೆ ನಡೆಸಲಾಗಿದೆ ಎಂದು ಹೇಳಿದರು.
ಜಿಲ್ಲೆಯ ಪ್ರತಿ ಠಾಣೆಯಲ್ಲಿ ಗುರುವಾರದಿಂದ ನಡೆಯುತ್ತಿರುವ ತೆರೆದ ಮನೆ ಕಾರ್ಯಕ್ರಮ ವಿಶೇಷವಾದುದು. ಪೊಲೀಸ್ ಠಾಣೆಯಲ್ಲಿನ ಕಾನೂನು ಕ್ರಮಗಳು, ಸಂವಿಧಾನ ಮುಂತಾದವುಗಳ ಕುರಿತು ವಿದ್ಯಾರ್ಥಿಗಳಿಗೆ ಸವಿವರವಾಗಿ ತಿಳಿಸಲಾಗುತ್ತಿದೆ. ಇದರಿಂದ ಗ್ರಾಮಗಳಲ್ಲಿಯೂ ವಿದ್ಯಾರ್ಥಿಗಳಿಗೆ ಕಾನೂನು ಅರಿವು, ಜಾಗೃತಿ ಮೂಡಲಿದೆ. ವಿದ್ಯಾರ್ಥಿಗಳನ್ನೇ ರಾಯಭಾರಿಗಳನ್ನಾಗಿಸಿ ಹಳ್ಳಿಗಳಲ್ಲಿ ಕಾನೂನು ಅರಿವು ಮೂಡಿಸಲಾಗುವುದು ಎಂದರು.
ಭಾನುವಾರ ಫೋನ್ ಇನ್:
ವಿಜಯವಾಣಿ ಕಚೇರಿಯಲ್ಲಿ ಸೆ.3ರಂದು ಫೋನ್ ಇನ್ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲೆಯ ಕಾನೂನು ಸುವ್ಯವಸ್ಥೆ ಸೇರಿ ವಿವಿಧ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಫೋನ್ ಕರೆ ಮಾಡಿ ಅಭಿಪ್ರಾಯ ತಿಳಿಸಬಹುದು ಎಂದು ಎಸ್ಪಿ ಹೇಳಿದರು.
ಡಿವೈಎಸ್ಪಿ ಅನಿಲ್‌ಕುಮಾರ್, ಸಿಪಿಐ ಸತ್ಯನಾರಾಯಣ, ಪಿಎಸ್‌ಐ ವಿ.ಟಿ.ದಿಲೀಪ್‌ಕುಮಾರ್ ಇದ್ದರು.