ಶಾಂಘೈನಲ್ಲಿ ಪೊಲೀಸರ ಜತೆ ಸಾರ್ವಜನಿಕರ ಜಟಾಪಟಿ; ಕಠಿಣ ಕೋವಿಡ್ ನಿಯಮಕ್ಕೆ ವ್ಯಾಪಕ ವಿರೋಧ

Shanghai
Published on

ಶಾಂಘೈ: ಕೋವಿಡ್ ರೋಗ ಪೀಡಿತರಿಗೆ ಮನೆ ಬಿಟ್ಟುಕೊಡುವಂತೆ ಆದೇಶಿಸಿರುವುದರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಶಾಂಘೈನ ನಿವಾಸಿಗಳು ‘ಹಜ್ಮತ್ ಸೂಟ್’ ಧರಿಸಿದ ಪೊಲೀಸರೊಂದಿಗೆ ಜಟಾಪಟಿ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚೀನಾದ ಆರ್ಥಿಕ ರಾಜಧಾನಿಯಾದ ಶಾಂಘೈನಲ್ಲಿ ಮೂರು ವಾರಗಳಿಂದ ಸೋಂಕು ತೀವ್ರವಾಗಿದ್ದು, ಶೂನ್ಯ-ಕೋವಿಡ್ ನೀತಿಯಿಂದಾಗಿ ಕಟ್ಟುನಿಟ್ಟಿನ ಲಾಕ್​ಡೌನ್ ವಿಧಿಸಲಾಗಿದೆ. ಇದರಿಂದ ಜನರು ರೋಸಿ ಹೋಗಿದ್ದು, ಆಡಳಿತಗಾರರ ವಿರುದ್ಧ ಆಕ್ರೋಶಗೊಂಡಿದ್ದಾರೆ.

ಶಾಂಘೈನಲ್ಲಿ 25 ಸಾವಿರಕ್ಕೂ ಅಧಿಕ ಹೊಸ ಕೇಸ್ ಪತ್ತೆಯಾಗಿರುವ ಕಾರಣ ಹತ್ತು ಸಾವಿರ ಹಾಸಿಗೆಗಳ ಆರೈಕೆ ಕೇಂದ್ರವನ್ನು ಸರ್ಕಾರ ತ್ವರಿತವಾಗಿ ನಿರ್ವಿುಸುತ್ತಿದೆ. ಇದರ ಜತೆಗೆ ಕೆಲವು ಪ್ರದೇಶದಲ್ಲಿ ಜನವಸತಿಗಳನ್ನು ಸೋಂಕಿತರ ಕ್ವಾರಂಟೈನ್ ಆಗಿ ಪರಿವರ್ತಿಸಲಾಗುತ್ತಿದೆ. ವಸತಿ ಸಮುಚ್ಚಯದಲ್ಲಿನ 39 ಮನೆಗಳನ್ನು ಖಾಲಿ ಮಾಡುವಂತೆ ಪೊಲೀಸರು ಆದೇಶಿಸಿದ್ದು, ಗುರುವಾರ ರಾತ್ರಿ ಘರ್ಷಣೆಗೆ ಕಾರಣವಾಯಿತು.

ಸ್ನಾತಕೋತ್ತರ ಪದವಿ ಕಲಿಯುತ್ತಿರುವ ಸನ್ ಜಿಯಾನ್ ಚೀನಾ ಯಾಂತೈ ನಗರದಲ್ಲಿ ಕರೊನಾ ಕಾರಣ ವಿಧಿಸಿರುವ ನಿರ್ಬಂಧ ಕ್ರಮವನ್ನು ವಿರೋಧಿಸಿ ಒಂದು ತಿಂಗಳಿಂದ ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈತನನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ.

ಭಾರತದಲ್ಲಿ 949 ಹೊಸ ಕೇಸ್: ಭಾರತದಲ್ಲಿ ಶುಕ್ರವಾರ 949 ಹೊಸ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಒಟ್ಟು ಸಂಖ್ಯೆ 4,30,39,972ಕ್ಕೆ ಮುಟ್ಟಿದೆ. ಇದರಲ್ಲಿ 11,191 ಮಾತ್ರ ಸಕ್ರಿಯ ಪ್ರಕರಣಗಳಾಗಿವೆ. 24 ತಾಸಿನಲ್ಲಿ ಆರು ಸೋಂಕಿತರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 5,21,743ಕ್ಕೆ ಏರಿಕೆ ಆಗಿದೆ. ಚೇತರಿಕೆ ಪ್ರಮಾಣ ಶೇ. 98.76 ಇದೆ ಎಂದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಮಾನಸಿಕ ಆರೋಗ್ಯಕ್ಕೆ ಹಾನಿ: ಕೋವಿಡ್ ತಡೆ ಲಸಿಕೆ ಹಾಕಿಸಿಕೊಂಡವರ ಮತ್ತು ಪಡೆಯದವರ ಮಾನಸಿಕ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಅಮೆರಿಕದ ಕ್ಯಾಲಿಫೋರ್ನಿಯಾದ ಅಧ್ಯಯನಕಾರರು ಹೇಳಿದ್ದಾರೆ. ಮೊದಲೇ ಮನೋವ್ಯಾಕುಲತೆ ಹೊಂದಿದವರು ಸೋಂಕಿನ ಸಂಪರ್ಕ ಬಂದರೆ ಮತ್ತಷ್ಟು ಖಿನ್ನರಾಗುತ್ತಾರೆ. ಕೋವಿಡ್ ಸೋಂಕು ಶುರುವಾದ ನಂತರ ಈ ರೀತಿಯ ಮನೋವ್ಯಾಧಿತರಲ್ಲಿ ಶೇ. 14.8ರಷ್ಟು ಮಂದಿ ಆಘಾತಕ್ಕೆ ಒಳಗಾಗುವಿಕೆ ಹೆಚ್ಚಿದೆ ಎಂದು ಅಧ್ಯಯನ ತಿಳಿಸಿದೆ.

ದೆಹಲಿಯಲ್ಲಿ ಗೃಹ ಐಸೋಲೇಷನ್ ಏರಿಕೆ: ದೆಹಲಿ ಕಳೆದೊಂದು ವಾರದಿಂದ ಮನೆಯಲ್ಲಿ ಐಸೋಲೇಷನ್ ಆಗುವವರ ಸಂಖ್ಯೆ ಶೇ. 48 ರಷ್ಟು ಹೆಚ್ಚಿದೆ. 574 ಮಂದಿ ಐಸೋಲೇಷನ್​ಗೆ ಒಳಗಾಗಿದ್ದಾರೆ. ದೈನಿಕ ಪಾಸಿಟಿವಿಟಿ ದರ ಶೇ. 3.95ಕ್ಕೆ ಹೆಚ್ಚಳ ಆಗಿದೆ.

ವಿಶ್ವದಲ್ಲಿ 50 ಕೋಟಿಗೆ ಏರಿದ ಕೇಸ್: ಒಮಿಕ್ರಾನ್ ಉಪತಳಿಗಳ ಹಾವಳಿಯ ಕಾರಣ ಜಾಗತಿಕವಾಗಿ ಕೋವಿಡ್ ಪ್ರಕರಣ ಹೆಚ್ಚಳ ಆಗುತ್ತಿದ್ದು, ವಿಶ್ವದಲ್ಲಿ ಸೋಂಕಿತರ ಸಂಖ್ಯೆ 50 ಕೋಟಿ ದಾಟಿದೆ. ಯುರೋಪ್ ಮತ್ತು ಏಷ್ಯಾದ ಹಲವು ರಾಷ್ಟ್ರಗಳಲ್ಲಿ ಬಿಎ.2 ತಳಿ ಉಲ್ಬಣವಾಗಿದ್ದು, ದಕ್ಷಿಣ ಕೊರಿಯಾದಲ್ಲಿ ದೈನಿಕ 1.82 ಲಕ್ಷ ಹೊಸ ಕೇಸ್​ಗಳು ಪತ್ತೆಯಾಗಿದೆ. ಜಾಗತಿಕವಾಗಿ ನಿತ್ಯದ ಸೋಂಕಿತರ ಸಂಖ್ಯೆಯಲ್ಲಿ ಪ್ರತಿ ನಾಲ್ವರಲ್ಲಿ ಕೊರಿಯಾದವರು ಒಬ್ಬರಿದ್ದಾರೆ. ತೈವಾನ್, ಥಾಯ್ಲೆಂಡ್, ಭೂತಾನ್​ಗಳಲ್ಲೂ ಸೋಂಕು ಹೆಚ್ಚಳ ಆಗಿದೆ.

ಯುರೋಪ್​ನಲ್ಲಿ ಎರಡು ದಿನಗಳಲ್ಲಿ 10 ಲಕ್ಷ ಹೊಸ ಕೇಸ್​ಗಳು ದೃಢಪಟ್ಟಿವೆ. ಈ ಪೈಕಿ ಜರ್ಮನಿಯಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದಿವೆ. ಅಮೆರಿಕದಲ್ಲಿ ಕೋವಿಡ್ ಇಳಿಮುಖವಾಗಿದೆ. ಜಾಗತಿಕವಾಗಿ ಕಂಡುಬರುತ್ತಿರುವ ಕೋವಿಡ್ ಪ್ರಕರಣಗಳ ಪೈಕಿ ಒಮಿಕ್ರಾನ್ ಬಿಎ.2 ಉಪತಳಿಯ ಹಾವಳಿ ಶೇ. 86 ಇದೆ. ಬಿಎ.1, ಬಿಎ.1.1ಗಿಂತ ಬಿಎ.2 ಪ್ರಸರಣ ವೇಗವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net