ಹಾಲಿನ ಖರೀದಿ ದರ ಕಡಿತಕ್ಕೆ ಜನಾಕ್ರೋಶ

4-klr-10 Komul
Published on

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟದ (ಕೋಚಿಮುಲ್) ಆಡಳಿತ ಮಂಡಳಿಯು ತಾತ್ಕಾಲಿಕವಾಗಿ ಪ್ರತಿ ಲೀಟರ್ ಹಾಲಿನ ದರ 2 ರೂ. ಕಡಿತಗೊಳಿಸಿ ಆದೇಶಿಸಿರುವುದು ಹಾಲು ಉತ್ಪಾದಕರ ಆಕ್ರೋಶಕ್ಕೆ ಕಾರಣವಾಗಿದೆ.

ಆಡಳಿತ ಮಂಡಳಿಯು ಯಾವುದೇ ಮುನ್ಸೂಚನೆ ನೀಡದೆ ರೈತರಿಂದ ಖರೀದಿಸುವ ಹಾಲಿನ ಪ್ರತಿ ಲೀಟರ್‌ಗೆ 2 ರೂ. ಕಡಿತಗೊಳಿಸಿದೆ. ಒಕ್ಕೂಟದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಆಡಳಿತ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಶುಕ್ರವಾರ ಬೆಳಗ್ಗೆಯಿಂದಲೇ ಪರಿಷ್ಕರಣೆ ದರ ಜಾರಿಗೆ ಬಂದಿದೆ. ಈ ಬೆನ್ನಲ್ಲೇ ಎರಡು ಜಿಲ್ಲೆಗಳ ರೈತರ ಆಕ್ರೋಶ ಸೋಟಗೊಂಡಿದೆ.
ಉತ್ಪಾದಕರ ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ಶೇ.4 ಫ್ಯಾಟ್‌, ಶೇ.8.5 ಎಸ್‌ಎನ್‌ಎಫ್‌ ಅಂಶವುಳ್ಳ ಪ್ರತಿ ಲೀಟರ್ ಹಾಲು ಖರೀದಿಗೆ 2 ರೂ. ಹೆಚ್ಚಿಸಲು ಡಿಸೆಂಬರ್‌ನಲ್ಲಿ ಆಡಳಿತ ಮಂಡಳಿ ತೀರ್ಮಾನ ಮಾಡಿತ್ತು. ಆದರೆ ಈಗ ದರ ಕಡಿತಗೊಳಿಸಲು ಕಾರಣವೇನು ಎಂಬುದು ಉತ್ಪಾದಕರ ಪ್ರಶ್ನೆಯಾಗಿದೆ.
ಇದುವರೆಗೂ ಹಾಲು ಉತ್ಪಾದಕರ ಸಂಘಗಳಿಗೆ ಪ್ರತಿ ಲೀಟರ್ ೩೫.೮೫ ರೂ. ಸಿಗುತ್ತಿತ್ತು. ಇದರಲ್ಲಿ ರೈತರಿಗೆ ಪ್ರತಿ ಲೀಟರ್ ಹಾಲಿಗೆ 33.40 ರೂ. ನೀಡಲಾಗುತ್ತಿತ್ತು. ಈಗ ಪ್ರತಿ ಲೀಟರ್‌ಗೆ 2 ರೂ. ಕಡಿಮೆ ಮಾಡಿರುವುದಿಂದ ಇನ್ನು ಮುಂದೆ ಸಂಘಗಳಿಗೆ ಲೀಟರ್‌ಗೆ 33.85 ರೂ. ಸಂದಾಯವಾಗಲಿದ್ದು, ರೈತರಿಗೆ 31.40 ರೂ. ಸಿಗಲಿದೆ.
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಒಟ್ಟು 1928 ಪ್ರಾಥಮಿಕ ಹಾಲು ಸಹಕಾರ ಸಂಘಗಳು ಸಕ್ರಿಯವಾಗಿದ್ದು, ಕೋಲಾರ ಜಿಲ್ಲೆಯಲ್ಲಿ ೯೫೨ ಹಾಗೂ ಚಿಕ್ಕಬಳ್ಳಾಪುರ 976 ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಬರಗಾಲದಲ್ಲೂ 9 ಲಕ್ಷಕ್ಕೂ ಹೆಚ್ಚು ಲೀಟರ್ ಪ್ರತಿದಿನ ಒಕ್ಕೂಟಕ್ಕೆ ಹಾಲು ಪೂರೈಕೆ ಮಾಡುತ್ತಿದ್ದವು. ಒಂದು ತಿಂಗಳಿಂದ ಉತ್ತಮ ಮಳೆಯಾಗಿದ್ದು, ಈಗ ಹಾಲಿನ ಉತ್ಪಾದನೆಯು ೧೨.೫೦ ಲಕ್ಷ ಲೀ.ಗೆ ಏರಿಕೆಯಾಗಿದೆ.
ರೈತರಿಗೆ ಸರ್ಕಾರವು ಪ್ರತಿ ಲೀಟರ್ ಹಾಲಿಗೆ 5ರೂ. ಪ್ರೋತ್ಸಾಹಧನ ನೀಡುತ್ತಿದೆ. ಆದರೆ, ಹಲವು ತಿಂಗಳಿಂದ ಈ ಹಣವೂ ಸಿಕ್ಕಿಲ್ಲ. ಚುನಾವಣೆಗಳು ನಡೆದು ಸರ್ಕಾರ ಬದಲಾದ ಕಾರಣ ತಡವಾಗಬಹುದು ಎಂದು ರೈತರು ನಂಬಿದ್ದರು. ಆದರೆ ಸರ್ಕಾರವೇ ಬಿಡುಗಡೆ ಮಾಡಿಲ್ಲ ಎಂಬ ಅರಿವಿನ ಕೊರತೆ ರೈತರಿಗಿತ್ತು. ಇದನ್ನು ಅರ್ಥೈಸುವಲ್ಲಿ ಸಂಘಗಳ ಕಾರ್ಯದರ್ಶಿಗಳು ವಿಫಲವಾಗಿದ್ದಾರೆ.

Milk
  • ನಿತ್ಯ 12.50 ಲಕ್ಷ ಲೀಟರ್ ಉತ್ಪಾದನೆ
    ಕಳೆದ ವರ್ಷಕ್ಕೆ ಹೋಲಿಸಿದರೆ ಸರಾಸರಿ ಶೇ.5 ಹೆಚ್ಚಿಸಿದ್ದೇವೆ. ಹಾಲು ಸಂಗ್ರಹವಾಗುವ ಪ್ರಮಾಣ ನೋಡಿಕೊಂಡು ದರ ಹೆಚ್ಚಿಸಲು ಮುಂದಿನ ದಿನಗಳಲ್ಲಿ ಕ್ರಮ ವಹಿಸುತ್ತೇವೆ. ನಮ್ಮಲ್ಲಿ ಸದ್ಯ ನಿತ್ಯ 12.50 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. 1.25 ಲಕ್ಷ ಕೆಜಿ ಮೊಸರು ಸಿಗುತ್ತಿದೆ. ಹೆಚ್ಚು ಹಾಲು ಸಂಗ್ರಹ ಕಾರಣ ಹಾಲಿನ ಪೌಡರ್ ತಯಾರಿಸಲು ಬಳಕೆ ಮಾಡುತ್ತಿದ್ದೇವೆ. ಆದರೆ, ಮಾರುಕಟ್ಟೆಯಲ್ಲಿ ಪೌಡರ್ ದರ ಕಡಿಮೆ ಇದ್ದು, ಹಾಲಿನ ಪೌಡರಿಗೂ ಬೇಡಿಕೆ ಕಡಿಮೆಯಾಗಿದೆ. ಇದರಿಂದ ಒಕ್ಕೂಟಕ್ಕೆ ನಷ್ಟವಾಗುತ್ತದೆ. ಎಲ್ಲರ ಹಿತದೃಷ್ಟಿಯಿಂದ ದರ ಕಡಿತ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಒಕ್ಕೂಟವು ಆದೇಶದಲ್ಲಿ ಸ್ಪಷ್ಟಪಡಿಸಿದೆ.
  • ರೈತರನ್ನು ಸಂಕಷ್ಟಕ್ಕೆ ದೂಡುವ ತೀರ್ಮಾನ
    ಸರ್ಕಾರ ಪ್ರತಿ ಲೀಟರ್‌ಗೆ ನೀಡುತ್ತಿರುವ 5 ರೂ. ಪ್ರೋತ್ಸಾಹಧನವೂ ಸರಿಯಾಗಿ ಬಿಡುಗಡೆಯಾಗುತ್ತಿಲ್ಲ. ಸಂಘಗಳ ಕಾರ್ಯದರ್ಶಿಯನ್ನು ಕೇಳಿದರೆ ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ ಎಂದು ಹೇಳುತ್ತಾರೆ. ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುವ ತೀರ್ಮಾನ ಇದಾಗಿದೆ ಎಂದು ತಾಲೂಕಿನ ತೊಟ್ಲಿ ಹಾಲು ಉತ್ಪಾದಕರ ರಮೇಶ್ ಆಕ್ರೋಶ ವ್ಯಕ್ತಪಡಿಸಿದರು.
  • ಬೆಲೆ ಏರಿಕೆ, ಕಡಿತ ಸಹಜ
    ರೈತರಿಗೆ ತೊಂದರೆಯಾಗದ ರೀತಿ ಕ್ರಮಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಏರಿಕೆ ಮಾಡಲು ಕ್ರಮವಹಿಸಲಾಗುವುದು ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲ ಮೂರ್ತಿ ತಿಳಿಸಿದ್ದಾರೆ. ಮಳೆಗಾಲದಲ್ಲಿ ಹಾಲಿನ ಸಂಗ್ರಹ ಪ್ರಮಾಣ ಹೆಚ್ಚಾದಾಗ ರೈತರಿಂದ ಖರೀದಿಸುವ ಹಾಲಿನ ದರ ಕಡಿತಗೊಳಿಸುವುದು, ಬೇಸಿಗೆಯಲ್ಲಿ ಉತ್ಪಾದನೆ ಕಡಿಮೆಯಾದಾಗ ದರ ಹೆಚ್ಚಿಸುವುದು ಸಹಜ. ಇನ್ನಿತರ ಒಕ್ಕೂಟಗಳಲ್ಲಿ ಈ ಹಿಂದೆಯೇ ಕಡಿತಗೊಳಿಸಿವೆ. ನಾವು ಈಗ ದರ ಕಡಿತಗೊಳಿಸಿದ್ದು, ಇದು ತಾತ್ಕಾಲಿಕ ಅಷ್ಟೆ ಎಂದು ಸ್ಪಷ್ಟಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net