ಸಾರ್ವಜನಿಕ ಜೀವನ ಮನೆಗೆ ಮಾರಿ, ಊರಿಗೆ ಉಪಕಾರಿ ಇದ್ದಂತೆ

abhinandana granta samarpana programme
ಆರ್ಯ ಈಡಿಗರ ಭವನದಲ್ಲಿ ಡಿಎಸ್‌ಎಸ್ ಸಂಚಾಲಕ ಎಂ.ಗುರುಮೂರ್ತಿ ಅವರ ಜನ್ಮದಿನಾಚರಣೆ ಮತ್ತು ಸಮುದ್ರ ಸಂಗಮ ಅಭಿನಂದನಾ ಗ್ರಂಥ ಸಮರ್ಪಣೆ ಕಾರ್ಯಕ್ರಮವನ್ನು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಉದ್ಘಾಟಿಸಿದರು. ಆಯನೂರು ಮಂಜುನಾಥ, ಪ್ರೊ. ಸಣ್ಣರಾಮ, ಪ್ರೊ. ಮೇಟಿ ಮಲ್ಲಿಕಾರ್ಜುನ, ಪ್ರೊ. ಎ.ಕೆ.ತಿಮ್ಮಪ್ಪ, ಬಿ.ಎ.ಕಾಟ್ಕೆ ಇದ್ದರು.
Published on

ಶಿವಮೊಗ್ಗ: ಸಾರ್ವಜನಿಕ ಜೀವನ ಎನ್ನುವುದು ಮನೆಗೆ ಮಾರಿ, ಊರಿಗೆ ಉಪಕಾರಿ ಎಂಬಂತೆ. ಅಪಹಾಸ್ಯಕ್ಕೀಡಾಗುವ ಸಾಧ್ಯತೆಗಳೇ ಹೆಚ್ಚು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.

ನಗರದ ಆರ್ಯ ಈಡಿಗರ ಭವನದಲ್ಲಿ ಭಾನುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಎಂ.ಗುರುಮೂರ್ತಿ ಅವರ 60ನೇ ವರ್ಷದ ಜನ್ಮದಿನಾಚರಣೆ ಮತ್ತು ಸಮುದ್ರ ಸಂಗಮ ಎಂಬ ಅಭಿನಂದನಾ ಗ್ರಂಥ ಸಮರ್ಪಣೆ ಕಾರ್ಯಕ್ರಮದಲ್ಲಿ ಅಭಿನಂದನಾ ಗ್ರಂಥ ಸಮರ್ಪಿಸಿ ಮಾತನಾಡಿದ ಅವರು, ಕುಟುಂಬದ ಸಮಸ್ಯೆಗಳನ್ನು ಬದಿಗಿಟ್ಟು ಸಾರ್ವಜನಿಕರಿಗಾಗಿ ಹೋರಾಟ ಮಾಡುವುದು ಶ್ರೇಷ್ಠ ಕೆಲಸ ಎಂದರು.
ಅಂಬೇಡ್ಕರ್ ಜನಿಸದೇ ಇದ್ದರೆ ವೇದಿಕೆಗಳಲ್ಲಿ ಕೂರಲು ದಲಿತರು ಇನ್ನೂರು ವರ್ಷ ಕಾಯಬೇಕಿತ್ತು. ಬದುಕುವ ಸ್ವಾತಂತ್ರ್ಯ ಸಿಕ್ಕಿದೆಯಾದರೂ ಸಮಾನತೆ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಭಿನಂದನಾ ನುಡಿಗಳನ್ನಾಡಿದ ಹಂಪಿ ಕನ್ನಡ ವಿವಿಯ ಪ್ರೊ. ಸಣ್ಣರಾಮ, ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ಚಿಂತನೆಗಳನ್ನು ಧಾರಣೆ ಮಾಡಿಕೊಂಡವರು ದಲಿತ ಹೋರಾಟಗಾರ ಪ್ರೊ. ಬಿ.ಕೃಷ್ಣಪ್ಪ. ಅವರ ಮುಂದುವರಿದ ಭಾಗವಾಗಿ ಡಿಎಸ್‌ಎಸ್ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಬೆಳೆದಿದ್ದಾರೆ ಎಂದು ಹೇಳಿದರು.
ಸಹ್ಯಾದ್ರಿ ಕಾಲೇಜಿನ ಪ್ರಧ್ಯಾಪಕ ಪ್ರೊ. ಮೇಟಿ ಮಲ್ಲಿಕಾರ್ಜುನ ಪ್ರಸ್ತಾವಿಕ ಮಾತನಾಡಿದರು. ಅಭಿನಂದನಾ ಗ್ರಂಥದ ಕುರಿತು ಶಿಕಾರಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ. ಎ.ಕೆ.ತಿಮ್ಮಪ್ಪ ಮಾತನಾಡಿದರು. ಅಭಿನಂದನಾ ಸಮಿತಿ ಅಧ್ಯಕ್ಷ ಬಿ.ಎ.ಕಾಟ್ಕೆ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ, ಜಿಲ್ಲಾ ದಲಿತ ನೌಕರರ ಒಕ್ಕೂಟದ ಅಧ್ಯಕ್ಷ ಪ್ರೊ. ಬಿ.ಎಲ್.ರಾಜು, ಸಮಿತಿ ಮುಖಂಡರಾದ ಹನುಮಂತಪ್ಪ ಯಡವಾಲ, ಹರಿಗೆ ರವಿ, ಎಂ ಏಳುಕೋಟಿ, ಅಭಿನಂದನಾ ಸಮಿತಿ ಮುಖಂಡ ಶಿವಬಸಪ್ಪ, ಚಿಕ್ಕಬಳ್ಳಾಪುರದ ಬಿ.ಎನ್.ಗಂಗಾಧರಪ್ಪ, ಜಯಪ್ಪ, ಕುಂದಗೋಳ ಮಂಜುನಾಥ, ಗಂಗಮಾಳಮ್ಮ, ಇಂದಿರಮ್ಮ ಗುರುಮೂರ್ತಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net