

ಆಲೂರು: ಒಂದೆಡೆ ಜೆಜಿಎಂ ಯೋಜನೆ ಜನರಲ್ಲಿ ಸಂತಸ ತಂದಿದ್ದು, ಮತ್ತೊಂದೆಡೆ ಗ್ರಾಮಗಳಲ್ಲಿ ಪೈಪ್‌ಲೈನ್‌ಗೆಂದು ರಸ್ತೆಗಳಲ್ಲಿ ಗುಂಡಿ ತೆಗೆದಿರುವುದರಿಂದ ಜನರು ಪರದಾಡುವಂತಾಗಿದೆ.
ಆಲೂರು ತಾಲೂಕಿನ ಪಾಳ್ಯ ಹೋಬಳಿಯ ವಿರುಪಾಪುರ ಗ್ರಾಮದ ರಸ್ತೆಯ ಸ್ಥಿತಿ ಸದ್ಯ ಸಂಪೂರ್ಣ ಹದಗೆಟ್ಟು ಸಂಚಾರ ಯೋಗ್ಯವಲ್ಲದ ಸ್ಥಿತಿ ತಲುಪಿದೆ. ಸೋಮವಾರ ಶಾಲಾ ವಿದ್ಯಾರ್ಥಿಗಳ ವಾಹನ ರಸ್ತೆ ಪಕ್ಕದ ಚರಂಡಿಗೆ ಕುಸಿದು ಅದೃಷ್ಟವಶಾತ್ ವಿದ್ಯಾರ್ಥಿಗಳಿಗೆ ಯಾವುದೇ ತೋಂದರೆಯಾಗಿಲ್ಲ.
ಬಿಕ್ಕೋಡು ರಸ್ತೆಯಿಂದ ವಿರುಪಾಪುರ, ಸಿದ್ದಾಪುರ, ಬಾವಹಳ್ಳಿ, ಮುರುಡೂರು, ಬೆಳ್ಳೂರು ಮಾರ್ಗವಾಗಿ ಪಾಳ್ಯ ನಾಡ ಕಚೇರಿಗೆ ಸಂಪರ್ಕಿಸುವ ರಸ್ತೆ ಇದಾಗಿದ್ದು ರಸ್ತೆಯಲ್ಲಿ ಗುಂಡಿಗಳೋ ಅಥವಾ ಗುಂಡಿಗಳ ಮಧ್ಯೆ ರಸ್ತೆಯೋ ಎಂಬಂತಾಗಿದೆ. ವಿರುಪಾಪುರ ಗ್ರಾಮದಲ್ಲಿಯ ಶಾಲಾ ಮಕ್ಕಳು, ಹೊಲ-ಗದ್ದೆಗಳಿಗೆ ತಮ್ಮ ದಿನನಿತ್ಯದ ಕೆಲಸಕ್ಕೆ ಸಂಚರಿಸುವ ರೈತರು, ಸಾರ್ವಜನಿಕರು ಇನ್ನು ಹಲವಾರು ಕೆಲಸ ಕಾರ್ಯಗಳಿಗೆ ಸಾಗಲು ಈ ರಸ್ತೆ ಮುಖ್ಯ ರಸ್ತೆಯಾದ್ದರಿಂದ ಇಲ್ಲಿಯೇ ಸಂಚರಿಸಬೇಕಿದೆ.
ಬಿಕ್ಕೋಡು ರಸ್ತೆಯಿಂದ ವಿರುಪಾಪುರ ಗ್ರಾಮದವರೆಗೂ ಅಂದರೆ ಸುಮಾರು 2 ಕಿಮೀ ರಸ್ತೆ ತೀರಾ ಹದಗೆಟ್ಟಿದ್ದು, ಬೈಕ್ ಹಾಗೂ ಇತರೆ ವಾಹನಗಳ ಸವಾರರು ಸರ್ಕಸ್ ಮಾಡಿಕೊಂಡೇ ಸಾಗುವಂತಾಗಿದೆ. ಈ ರಸ್ತೆ ಲೋಕೊಪಯೋಗಿ ಇಲಾಖೆಗೆ ಒಳಪಟ್ಟಿದ್ದು, ದುರಸ್ತಿಪಡಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಬರೀ ಉಡಾಫೆ ಉತ್ತರಗಳನ್ನು ನೀಡಿ ಸಾಗಹಾಕುತ್ತಾರೆ. ಅಧಿಕಾರಿಗಳ ನಡೆ ಬೇಸರ ತಂದಿದ್ದು, ಹೆಚ್ಚಿನ ಅವಘಡಗಳು ಸಂಭವಿಸುವ ಮೊದಲು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.\
ಈ ರಸ್ತೆಯಲ್ಲಿ ಸಂಚರಿಸುವಾಗ ಹಲವು ಸಂದರ್ಭಗಳಲ್ಲಿ ಜನರು ಸಣ್ಣಪುಟ್ಟ ಅಪಘಾತಗಳಿಗೆ ತುತ್ತಾಗಿದ್ದಾರೆ. ಆದ್ದರಿಂದ ರಸ್ತೆಉಮ್ಮಿ ಶೀಘ್ರ ದುರಸ್ತಿಪಡಿಸಿ ಸುತ್ತಲಿನ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ವಿರುಪಾಪುರ ಗ್ರಾಮಸ್ಥರು, ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.