

ಬೆಂಗಳೂರು: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ಹಿರಿಯ ಉಪನ್ಯಾಸಕರ ಮೂಲಕ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳ ಸ್ಥಿತಿ-ಗತಿಗಳ ಮಾಹಿತಿ ಸಂಗ್ರಹಿಸುವುದಕ್ಕೆ ಮುಂದಾಗಿರುವುದನ್ನು ತಕ್ಷಣ ಕೈಬಿಡಬೇಕೆಂದು ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಶಿಕ್ಷಣ ಸಚಿವರಿಗೆ ಪತ್ರ ಬರೆದು ಆಗ್ರಹಿಸಿದೆ.
ಡಯಟ್‌ನಲ್ಲಿರುವವರು ಉಪನ್ಯಾಸಕರಲ್ಲ. ಇವರು ಬಿ.ಎಸ್ಸಿ, ಬಿ.ಎ, ಬಿ.ಇಡಿ ಮಾಡಿಕೊಂಡಿರುವ ಪ್ರಶಿಕ್ಷಕರು. ಇವರ ವಿದ್ಯಾರ್ಹತೆ ಪಿಯು ಉಪನ್ಯಾಸಕರ ವಿದ್ಯಾರ್ಹತೆಗೆ ಸರಿಸಮನಾಗಿಲ್ಲ. ಇವರಿಗೆ ವಿಷಯಾಧಾರಿತ ಬೋಧನಾ ಪದ್ಧತಿಯಲ್ಲಿ ಪಾಠ ಮಾಡುತ್ತಾರೆಯೇ ವಿನಾ ಅವರಿಗೆ ಪದವಿ ಪೂರ್ವ ಶಿಕ್ಷಣ ವಿಷಯಕ್ಕೆ ಸಂಬಂಧಿಸಿದ ಯಾವುದೇ ಆಳವಾದ ಜ್ಞಾನವಿರುವುದಿಲ್ಲ. ಪದವಿಪೂರ್ವ ಶಿಕ್ಷಣ ಹಂತವು ಶಾಲಾ ತರಬೇತಿಯ ವಿಸ್ತರಣೆ ಅಲ್ಲ. ಅದು ವೈಜ್ಞಾನಿಕ ಆಧಾರಿತ ಸ್ಪರ್ಧಾತ್ಮಕ ಹಾಗೂ ರಾಷ್ಟ್ರಮಟ್ಟದ ಪಠ್ಯಕ್ರಮ. ಡಯಟ್ ಉಪನ್ಯಾಸಕರಿಗೆ ಪದವಿ ಪೂರ್ವ ಪಠ್ಯಕ್ರಮ ವೈಜ್ಞಾನಿಕ ಹಿನ್ನೆಲೆ ಎನ್‌ಸಿಇಆರ್‌ಟಿ ಆಧಾರಿತ ವಿಷಯದ ವ್ಯಾಪ್ತಿ ಹಾಗೂ ಆಳವಾದ ಕಲ್ಪನೆಗಳ ಕುರಿತು ಅರಿವು ಇರುವುದಿಲ್ಲ. ಬಹುತೇಕ ಪ್ರಶಿಕ್ಷಕರಿಗೆ ನೆಟ್, ಸ್ಲೆಟ್, ಪಿಎಚ್.ಡಿ ಪದವಿ ಇರುವುದಿಲ್ಲ.
ಇನ್ನೂ ಡಯಟ್‌ನ ಪ್ರಶಿಕ್ಷಕರು ಪ್ರೌಢಶಾಲೆಯಲ್ಲಿ ಹಿರಿಯ ಸಹಾಯಕ ಶಿಕ್ಷಕರ ಹುದ್ದೆಯಿಂದ ಬಡ್ತಿ ಪಡೆದಿರುತ್ತಾರೆ. ಪದವಿ ಪೂರ್ವ ಶಿಕ್ಷಣದ ಗಣಿತಶಾಸ, ರಸಾಯನಶಾಸ, ಜೀವಶಾಸ ಸೇರಿ ಹಲವು ವಿಷಯಗಳಿರುತ್ತವೆ. ಈ ರೀತಿಯ ಎಲ್ಲ ವಿಷಯ ಮೂಲಭೂತ ಅರಿವಿಲ್ಲದವರು, ವಿಜ್ಞಾನ ಪೂರ್ಣ ದೃಷ್ಟಿಕೋನವಿಲ್ಲದವರು, ಪದವಿ ಪೂರ್ವ ಮಟ್ಟದ ಉಪನ್ಯಾಸಕರ ಬೋಧನೆ ಪ್ರಾಯೋಗಿಕತೆ, ಪಠ್ಯ
ಮೌಲ್ಯವನ್ನು ಹೇಗೆ ಪರಿಶೀಲಿಸುತ್ತಾರೆ.?
ಈ ಎಲ್ಲ ಕಾರಣಗಳಿಂದಾಗಿ ಶಾಲಾ ಶಿಕ್ಷಣ ಇಲಾಖೆಯು ಈ ಸಮೀಕ್ಷಾ ಸುತ್ತೋಲೆಯನ್ನು ಹಿಂಪಡೆಯಬೇಕು. ಇಲ್ಲವಾದರೆ, ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಸಂಘದ ಅಧ್ಯಕ್ಷ ಎ.ಎಚ್. ನಿಂಗೇಗೌಡ ಎಚ್ಚರಿಸಿದ್ದಾರೆ.