ಪಂ. ವಿನಾಯಕ ತೊರವಿ ಅಮೃತ ಮಹೋತ್ಸವ ಇಂದು

Published on

ಧಾರವಾಡ: ಹಿಂದುಸ್ತಾನಿ ಗಾಯಕ ಪಂ. ವಿನಾಯಕ ತೊರವಿ ಅವರ 75ನೇ ಜನ್ಮದಿನ ನಿಮಿತ್ತ ಗೌರವ ಸಲ್ಲಿಸುವ ಬೆಂಗಳೂರಿನ ಗುರುರಾವ ದೇಶಪಂಡೆ ಸಂಗೀತ ಸಭಾ ಹಾಗೂ ಧಾರವಾಡದ ಭಾರತೀಯ ಸಂಗೀತ ವಿದ್ಯಾಲಯ ಆಶ್ರಯದಲ್ಲಿ ಪಂ. ವಿನಾಯಕ ತೊರವಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ನ. 26 ರಂದು ಸಂಜೆ 5 ಗಂಟೆಯಿಂದ ಇಲ್ಲಿನ ಸೃಜನಾ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಪಂ. ವಿನಾಯಕ ತೊರವಿ ಶಿಷ್ಯೆ ವಿಭಾ ಕಿನ್ಹಾಳ ಗಾಯನ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಗುವುದು. ನಂತರ ಪಂ. ವಿನಾಯಕ ತೊರವಿ ಸನ್ಮಾನ ಸಮಾರಂಭ ನಡೆಯಲಿದ್ದು, ಅತಿಥಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಆಗಮಿಸಲಿದ್ದಾರೆ. ನಂತರ ಮುಂಬೈನ ಖ್ಯಾತ ಗಾಯಕ ಪಂ. ರಾಮ ದೇಶಪಾಂಡೆ ಗಾಯನ ಪ್ರಸ್ತುತಪಡಿಸಲಿದ್ದಾರೆ. ಸಹ ಕಲಾವಿದರಾಗಿ ಗುರುಪ್ರಸಾದ ಹೆಗಡೆ (ಹಾರ್ಮೋನಿಯಂ) ಹಾಗೂ ಶ್ರೀಧರ ಮಾಂಡ್ರೆ, ಯೋಗೀಶ ಭಟ್ (ತಬಲಾ) ಪಾಲ್ಗೊಳ್ಳಲಿದ್ದಾರೆ.
ಧಾರವಾಡದಲ್ಲಿ ಜನಿಸಿರುವ ಪಂ. ವಿನಾಯಕ ತೊರವಿ ಗಾಯನಾಚಾರ್ಯ ಪಂ. ಗುರುರಾವ ದೇಶಪಾಂಡೆ ಹಾಗೂ ಭಾರತರತ್ನ ಪಂ. ಭೀಮಸೇನ ಜೋಶಿ ಪಟ್ಟಶಿಷ್ಯರು. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಸೇರಿ ಅನೇಕ ಪುರಸ್ಕಾರ ಪಡೆದಿದ್ದಾರೆ. ಅನೇಕ ಉತ್ತಮ ಶಿಷ್ಯರನ್ನು ತಯಾರು ಮಾಡಿರುವ ಹೆಗ್ಗಳಿಕೆ ವಿನಾಯಕ ತೊರವಿಯವರದ್ದು. 75 ವಸಂತಗಳನ್ನು ಪೂರೈಸಿರುವ ಸಂದರ್ಭದಲ್ಲಿ ಈಗ ಅಮೃತ ಮಹೋತ್ಸವ ಸಮಾರಂಭ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net