

ಬೆಂಗಳೂರು: ವಿಶೇಷ ಘಟಕಗಳಲ್ಲಿ ಎರವಲು ಸೇವೆ ಸಲ್ಲಿಸುತ್ತಿರುವ ಎಸ್‌ಐ ಮತ್ತು ಕೆಳ ದರ್ಜೆ ಸಿಬ್ಬಂದಿ, 3 ವರ್ಷ ಪೂರೈಸಿದ್ದರೇ ಮಾತೃ ಘಟಕಕ್ಕೆ ವರದಿ ಮಾಡಿಕೊಳ್ಳುವಂತೆ ಪೊಲೀಸ್ ಇಲಾಖೆ ಆದೇಶಿಸಿದೆ.
ರಾಜ್ಯ ಪೊಲೀಸ್ ಹೆಚ್ಚುವರಿ ಮಹಾನಿರ್ದೇಶಕ(ಆಡಳಿತ) ಸೌಮೇಂದು ಮುಖರ್ಜಿ, ಈ ಆದೇಶ ಹೊರಡಿಸಿದ್ದಾರೆ. ರಾಜ್ಯ ಗುಪ್ತವಾರ್ತೆ, ಸಿಐಡಿ, ಅರಣ್ಯ ಘಟಕ, ಲೋಕಾಯುಕ್ತ, ಕೆಪಿಟಿಸಿಎಲ್, ಬಿಡಿಎ, ಬಿಎಂಟಿಎ್, ಹೈಕೋರ್ಟ್, ಕೆಎಟಿ, ಸಿಎಟಿ, ಡಿಸಿಆರ್‌ಇ, ಎಸ್‌ಸಿಆರ್‌ಬಿ ಇತ್ಯಾದಿ ವಿಶೇಷ ಘಟಕಗಳಿಗೆ ಪಿಎಸ್‌ಐ ಮತ್ತು ಕೆಳ ದರ್ಜೆ ಪೊಲೀಸರನ್ನು ನಿಯೋಜನೆ ಮಾಡಲಾಗಿರುತ್ತದೆ.
ಸರ್ಕಾರಿ ನೌಕರರ ಎರವಲು ಸೇವೆಯು ಪ್ರಾರಂಭದ 3 ವರ್ಷ ಸಾಮಾನ್ಯ ಅವಧಿ ಮತ್ತು ಗರಿಷ್ಠ 5 ವರ್ಷಗಳಿಗೆ ಸೀಮಿತವಾಗಿರಬೇಕು ಎಂದು ಸೂಚಿಸಿದೆ. ಅವಧಿ ಮೀರಿ ಮುಂದುವರಿಯುವುದು ಆಡಳಿತಾತ್ಮಕ ದೃಷ್ಟಿಯಿಂದ ಸೂಕ್ತವಲ್ಲ. ಆದರಿಂದ ವಿಶೇಷ ಘಟಕದಲ್ಲಿ 3 ವರ್ಷ ಅವಧಿ ಪೂರೈಸಿದ ಎಸ್‌ಐ, ಸಿಬ್ಬಂದಿ ಮಾರ್ಗಸೂಚಿ ಪಾಲನೆ ಮಾಡಬೇಕೆಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಎಸ್‌ಐ, ಸಿಬ್ಬಂದಿ ಎರವಲು ಸೇವೆ ಪ್ರಾರಂಭದ ಸಾಮಾನ್ಯ ಅವಧಿ 3 ವರ್ಷಕ್ಕೆ ಸೀಮಿತ ಆಗಿರಬೇಕು. 3 ವರ್ಷ ಮುಗಿದ ಬಳಿಕ ವಿಶೇಷ ಸಂದರ್ಭ/ಕಾರಣಗಳಿದ್ದಲ್ಲಿ ಪೊಲೀಸ್ ಪ್ರಧಾನ ಕಚೇರಿಯಿಂದ ವಿಶೇಷ ಆದೇಶದ ಮೇರೆಗೆ ಮಾತ್ರ ವಿಸ್ತರಿಸಲಾಗುತ್ತದೆ.
ಎರವಲು ಸೇವೆ ಗರಿಷ್ಠ ಅವಧಿ 5 ವರ್ಷ ಮುಗಿದಿದ್ದರೇ ಮಾತೃ ಘಟಕದಲ್ಲಿ ಕನಿಷ್ಠ 2 ವರ್ಷವಾದರೂ ಚಾತುರ್ಮಶ್ಯ ಅವಧಿ ಪೂರೈಸಬೇಕು. ಇಲ್ಲವಾದರೆ, ಎರವಲು ಸೇವೆಗೆ ನಿಯೋಜನೆಗೆ ಅವಕಾಶ ಇರುವುದಿಲ್ಲ. ಎಲ್ಲ ಎಸ್‌ಪಿ ಮತ್ತು ಪೊಲೀಸ್ ಆಯುಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಎಡಿಜಿಪಿ ಸೌಮೇಂದು ಮುಖರ್ಜಿ ಆದೇಶಿಸಿದ್ದಾರೆ.