ಪಿಎಸ್​ಐ ಪರೀಕ್ಷೇಲಿ ಗೋಲ್​ಮಾಲ್?: ಒಂದೇ ಕೇಂದ್ರದ 50 ಅಭ್ಯರ್ಥಿಗಳು ಆಯ್ಕೆ ಆಗಿದ್ದು ಹೇಗೆ

PSI
Published on

ಬೆಂಗಳೂರು: ಸಬ್ ಇನ್​ಸ್ಪೆಕ್ಟರ್ ಹುದ್ದೆಗೆ 30-45 ಲಕ್ಷ ರೂ.ವರೆಗೂ ಡೀಲ್ ನಡೆಯುತ್ತದೆಂಬ ಆರೋಪ ಜೀವಂತವಾಗಿರುವಾಗಲೇ ಇದಕ್ಕೆ ಪುಷ್ಟಿ ನೀಡುವಂತೆ ಇತ್ತೀಚೆಗೆ ನಡೆದ 200 ಪಿಎಸ್​ಐ ಹುದ್ದೆ ಪರೀಕ್ಷೆಯಲ್ಲೂ ಅಕ್ರಮದ ವಾಸನೆ ಬಡಿದೆ. ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ 50 ಅಭ್ಯರ್ಥಿಗಳು ಉತ್ತೀರ್ಣರಾಗಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿರುವುದು ಅನುಮಾನ ಮೂಡಿಸಿದೆ.

2019-20ನೇ ಸಾಲಿನ 200 ಪೊಲೀಸ್ ಸಬ್ ಇನ್​ಸ್ಪೆಕ್ಟರ್ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಜ. 5ರಂದು ಪರೀಕ್ಷೆ ನಡೆದಿತ್ತು. ಇದೀಗ ಫಲಿತಾಂಶ ಪ್ರಕಟವಾಗಿದೆ. ಧಾರವಾಡದಲ್ಲಿ ಪರೀಕ್ಷೆ ಬರೆದ 50 ಹಾಗೂ ಮತ್ತೊಂದು ಕೇಂದ್ರದ 58 ಅಭ್ಯರ್ಥಿಗಳು ಪಾಸಾಗಿದ್ದಾರೆ. ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಪಿಎಸ್​ಐ ಹುದ್ದೆಯ ಆಕಾಂಕ್ಷಿ ಅಭ್ಯರ್ಥಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಿಎಂ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಡಿಜಿಪಿ ಪ್ರವೀಣ್ ಸೂದ್​ಗೆ ಅನಾಮಿಕರ ಹೆಸರಿನಲ್ಲಿ ಪತ್ರ ಬರೆದು ತನಿಖೆ ನಡೆಸಿ ಅಕ್ರಮ ಬಯಲಿಗೆಳೆಯುವಂತೆ ಒತ್ತಾಯಿಸಿದ್ದಾರೆ.

ಪರೀಕ್ಷೆಗೆ ಫೋನ್ ಬಳಕೆ

ಪರೀಕ್ಷಾ ಕೇಂದ್ರದಲ್ಲಿ ಅಕ್ಕ-ಪಕ್ಕದಲ್ಲಿ ಕುಳಿತಿರುವವರೇ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಜಾಗ ಪಡೆದಿದ್ದಾರೆ. ಇದನ್ನು ಗಮನಿಸಿದರೆ ಸಾಮೂಹಿಕ ನಕಲಿನ ಸಾಧ್ಯತೆ ದಟ್ಟವಾಗುತ್ತದೆ. ಪರೀಕ್ಷೆಯಲ್ಲಿ ಫೋನ್ ಬಳಕೆಯಾಗಿರುವ ಅನುಮಾನವೂ ಇದೆ. ಆಯ್ಕೆಪಟ್ಟಿಯಲ್ಲಿ ಲಗತ್ತಿಸಿರುವ ಕ್ರಮಸಂಖ್ಯೆಗಳಿರುವ ಕೊಠಡಿಗಳಲ್ಲಿನ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದರೆ ಅಕ್ರಮ ಬಯಲಾಗುತ್ತದೆ ಎಂದು ಮನವಿ ಮಾಡಿದ್ದಾರೆ.

ಪರೀಕ್ಷಾ ಕೇಂದ್ರ ಬದಲಾಯಿಸಿ

ಇತ್ತೀಚೆಗೆ ಉತ್ತರ ಕರ್ನಾಟಕ ಭಾಗದ ಪರೀಕ್ಷಾ ಕೇಂದ್ರಗಳಲ್ಲಿ ನಕಲು ನಡೆಯುತ್ತಿದೆ. ಇದರಿಂದ ಇನ್ನುಳಿದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ರಾಜ್ಯದ ಉತ್ತರ ಭಾಗದ ಅಭ್ಯರ್ಥಿಗಳನ್ನು, ದಕ್ಷಿಣ ಕರ್ನಾಟಕದ ಪರೀಕ್ಷಾ ಕೇಂದ್ರಗಳಲ್ಲಿ ಹಾಗೂ ರಾಜ್ಯದ ದಕ್ಷಿಣ ಭಾಗದ ಅಭ್ಯರ್ಥಿಗಳನ್ನು ಉತ್ತರ ಭಾಗದಲ್ಲಿ ಪರೀಕ್ಷೆ ಬರೆಯುವಂತೆ ಮಾಡಬೇಕು. ಈ ರೀತಿ ಪರೀಕ್ಷಾ ಕೇಂದ್ರ ಬದಲಾಯಿಸಿದಲ್ಲಿ ನಕಲು ತಡೆಯಬಹುದು ಎಂದು ಸಲಹೆ ಮಾಡಿದ್ದಾರೆ.

ಒಬ್ಬನೇ ವ್ಯಕ್ತಿ, ಎರಡು ಕಡೆ!

ಕ್ರಮಸಂಖ್ಯೆ-3738329 ಮತ್ತು 3742979 ಇಲಾಖೆ ಬಿಡುಗಡೆ ಮಾಡಿರುವ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿದೆ. ಆದರೆ, ಎರಡೂ ಕ್ರಮಸಂಖ್ಯೆ ಬೇರೆಯಾದರೂ ಹೆಸರು ಮಾತ್ರ ಮಹೇಶ್ ಮಾಲಿ ಎಂದಿದೆ. ಇದೂ ಕೂಡ ಅಕ್ರಮಕ್ಕೆ ಪುಷ್ಟಿ ನೀಡುತ್ತದೆ.

| ಯಂಕಣ್ಣ ಸಾಗರ್ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net