ಪ್ರಚೋದನಕಾರಿ ಹೇಳಿಕೆ : ಜೆ.ಪಿ. ನಡ್ಡಾ ವಿರುದ್ಧ ಕೇಸ್‌ಗೆ ಹೈ ತಡೆ

highcourt
Published on

ಬೆಂಗಳೂರು: ಚುನಾವಣೆ ವೇಳೆ ಬಿಜೆಪಿಯ ಅಧಿಕೃತ ಇನ್‌ಸ್ಟ್ರಾಗ್ರಾಂ ಖಾತೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಪ್ರಚೋದನಕಾರಿ ಹೇಳಿಕೆ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವಿರುದ್ಧ ಕಲಬುರಗಿಯ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಪ್ರಕರಣ ಸಂಬಂಧ ಕಲಬುಗರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹಾರವಾಳ ಗ್ರಾಮದ ಪ್ರವೀಣ್ ಕುಮಾರ್ ಪಾಟೀಲ್ ದಾಖಲಿಸಿರುವ ದೂರು ಹಾಗೂ ಅದರ ಸಂಬಂಧ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ನ್ಯಾಯಿಕ ಪ್ರಕ್ರಿಯೆಗಳನ್ನು ರದ್ದುಪಡಿಸುವಂತೆ ಕೋರಿ ಜೆ.ಪಿ. ನಡ್ಡಾ ಹಾಗೂ ಬಿಜೆಪಿ ರಾಷ್ಟ್ರೀಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು.

ಈ ವೇಳೆ ಅರ್ಜಿದಾರರ ಪರ ವಕೀಲ ವಾದ ಮಂಡಿಸಿ, ದೂರಿನಲ್ಲಿ ಐಪಿಸಿ ಸೆಕ್ಷನ್ 153 (ಎ) ಅಡಿ ಆರೋಪಿಸಲಾಗಿದೆ. ಆದರೆ, ಅದಕ್ಕೆ ಸಾಕ್ಷಾೃಧಾರಗಳಿಲ್ಲ. ದೆಹಲಿಯಲ್ಲಿ ಟ್ವೀಟ್ ಮಾಡಿರುವುದಕ್ಕೂ ಕಲಬುರಗಿಗೂ ಏನು ಸಂಬಂಧ? ಅರ್ಜಿದಾರರ ವಿರುದ್ಧದ ಇಂತಹದ್ದೇ ಬೇರೊಂದು ಪ್ರಕರಣವನ್ನು ನ್ಯಾಯಾಲಯ ರದ್ದುಪಡಿಸಿದೆ. ಈ ಹಂತದಲ್ಲಿ ಈ ಪ್ರಕರಣಕ್ಕೆ ಸಂಪೂರ್ಣ ತಡೆ ನೀಡಬೇಕು ಎಂದು ಕೋರಿದರು.

ವಾದ ಆಲಿಸಿದ ನ್ಯಾಯಪೀಠ, ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿತು. ಅಲ್ಲದೇ ದೂರುದಾರ ಪ್ರವೀಣ್ ಕುಮಾರ್ ಪಾಟೀಲ್‌ಗೆ ನೋಟಿಸ್ ಜಾರಿಗೊಳಿಸಿತು. ಹೈಕೋರ್ಟ್ ಅನುಮತಿಯಿಲ್ಲದೆ ದೋಷಾರೋಪಣ ಪಟ್ಟಿ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಬಾರದು ಎಂದು ಪ್ರಕರಣದ ತನಿಖಾಧಿಕಾರಿಗಳಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಅ. 24ಕ್ಕೆ ಮುಂದೂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net