

ಶಿವಮೊಗ್ಗ: ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ರೈತರಿಗೆ ಉತ್ತಮ ಸಹಕಾರ ಮತ್ತು ಸೌಲಭ್ಯ ನೀಡಿದರೆ ದೇಶದ ಅಭಿವೃದ್ಧಿಗೆ ಬಲ ಬರುತ್ತದೆ. ಉತ್ತಮ ವಹಿವಾಟು ನಡೆಸುತ್ತಿರುವ ಶಿವಮೊಗ್ಗ ಎಪಿಎಂಸಿ ಜಿಲ್ಲೆಗೆ ಕಿರೀಟದಂತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಶಿವಮೊಗ್ಗ ಎಪಿಎಂಸಿ ಪ್ರಾಂಗಣದಲ್ಲಿ ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಶಿವಮೊಗ್ಗ ಎಪಿಎಂಸಿ ರಾಜ್ಯದಲ್ಲೇ ಎರಡನೇ ಅತಿ ಹೆಚ್ಚು ವಹಿವಾಟು ನಡೆಸುವ ಕೇಂದ್ರ ಎಂದರು.
ಶಿವಮೊಗ್ಗ ಜಿಲ್ಲೆ ಅತಿ ಹೆಚ್ಚು ಅಡಕೆ ಬೆಳೆಯುವ ಪ್ರದೇಶ. ಅಡಕೆ, ಶುಂಠಿ, ಅರಿಶಿಣ, ಅನಾನಸ್ ಇತರೆ ಬೆಳೆಗೆ ಬೇಸಿಗೆಯಲ್ಲೂ ನೀರಿನ ಅವಶ್ಯಕತೆ ಇದ್ದು, ಉಚಿತ ವಿದ್ಯುತ್‌ನಿಂದ ರೈತರಿಗೆ ಅನುಕೂಲವಾಗಿದೆ. ರಾಜ್ಯ ಸರ್ಕಾರವು ಈ ಯೋಜನೆಗೆ 21 ಸಾವಿರ ಕೋಟಿ ಹಣವನ್ನು ರೈತರ ಪರವಾಗಿ ಪಾವತಿಸುತ್ತಿದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಮಾತನಾಡಿ, 1950 ರಲ್ಲಿ ಸ್ಥಾಪನೆಯಾದ ಶಿವಮೊಗ್ಗ ಎಪಿಎಂಸಿ 102 ಎಕರೆ ಪ್ರದೇಶದಲ್ಲಿ ವಿವಿಧ ಕಟ್ಟಡಗಳನ್ನು ಹೊಂದಿದೆ. ಪ್ರಸ್ತುತ ಪ್ರಾಂಗಣದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ 28 ಮಳಿಗೆಗಗಳನ್ನು ನಿರ್ಮಿಸಲಾಗಿದೆ. ಈಗಾಗಲೇ ಹರಾಜು ಮೂಲಕ 23 ಮಳಿಗೆಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಎಪಿಎಂಸಿ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಮತ್ತು ಸೌಲಭ್ಯ ನೀಡುವ ಮೂಲಕ ರೈತರ ಬೆನ್ನೆಲುಬಾಗಿದೆ. ರೈತರಿಗೆ ಆನ್‌ಲೈನ್ ವಹಿವಾಟು ಮತ್ತು ಎಪಿಎಂಸಿ ಹೊರಗಡೆಯೂ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಇದೇ ನೂತನ ಕಟ್ಟಡದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಕೂಡ ಕಾರ್ಯನಿರ್ವಹಿಸಲಿದ್ದು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.
ರಾಜ್ಯ ಭೋವಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ಹಾಪ್‌ಕಾಮ್ಸ್ ಅಧ್ಯಕ್ಷ ವಿಜಯಕುಮಾರ್, ಡಿಸಿ ಗುರುದತ್ತ ಹೆಗಡೆ, ಎಪಿಎಂಸಿ ಕಾರ್ಯದರ್ಶಿ ಎಚ್.ವೈ.ಸತೀಶ್ ಇತರರಿದ್ದರು.