ಸಬ್ ರಿಜಿಸ್ಟ್ರಾರ್‌ಗಳಿಗೆ ಲಾಗಿನ್ ಐಡಿ ಒದಗಿಸಿ

High court logo 2
Published on

ಬೆಂಗಳೂರು: ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕೌನ್ಸಲಿಂಗ್ ವರ್ಗಾವಣೆ ಪ್ರಶ್ನಿಸಿರುವ ಅಧಿಕಾರಿಗಳಿಗೆ ಲಾಗಿನ್ ಐಡಿ ಕೊಟ್ಟು ಕರ್ತವ್ಯ ನಿರ್ವಹಿಸಲು ಅವಕಾಶ ನೀಡಬೇಕೆಂದು ಹೈಕೋರ್ಟ್ ಆದೇಶಿಸಿದೆ.

ಕೌನ್ಸಲಿಂಗ್ ವರ್ಗಾವಣೆ ಪ್ರಶ್ನಿಸಿರುವ ಕಿರಿಯ, ಹಿರಿಯ ಸಬ್ ರಿಜಿಸ್ಟ್ರಾರ್‌ಗಳಿಗೆ, ಹಿಂದಿನ ಕಚೇರಿಯಲ್ಲಿ ಲಾಗಿನ್ ಐಡಿ ಸೌಲಭ್ಯ ಕೊಟ್ಟು ಎಂದಿನಂತೆ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಬೇಕು. ಜ.7ರವರೆಗೂ ಮುಂದುವರಿಯಲಿ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಹೈಕೋರ್ಟ್ ದ್ವಿಸದಸ್ಯ ನ್ಯಾಯಪೀಠ ಆದೇಶಿಸಿದೆ.

90 ಅಧಿಕಾರಿಗಳ ವರ್ಗಾವಣೆ ಆದೇಶ ಪ್ರಶ್ನಿಸಿ ಸಬ್ ರಿಜಿಸ್ಟ್ರಾರ್‌ಗಳು ಕೆಎಟಿ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೆಎಟಿ, ವರ್ಗಾವಣೆ ಆದೇಶವನ್ನು ಒಪ್ಪಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಅಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.

ಡಿ.16ರಂದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ದ್ವಿಸದಸ್ಯ ನ್ಯಾಯಪೀಠ, ವರ್ಗಾವಣೆ ಆದೇಶದಂತೆ ಹೊಸ ಕಚೇರಿಗೆ ವರದಿ ಮಾಡಿಕೊಂಡಿರುವ 32 ಅಧಿಕಾರಿಗಳಿಗೆ ಈ ಮಧ್ಯಂತರ ಆದೇಶದಿಂದ ಯಾವುದೇ ಪರಿಹಾರ ಇಲ್ಲ. ಔಪಚಾರಿಕವಾಗಿ ಕಚೇರಿಯಿಂದ ಬಿಡುಗಡೆಯಾದ 24 ಅಧಿಕಾರಿಗಳು ಹೊಸ ಕಚೇರಿಗೆ ಹೋಗಬೇಕಿಲ್ಲ. ಹಿಂದಿನ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಬಹುದು ಮತ್ತು ಅರ್ಜಿದಾರರಿಗೆ ರಕ್ಷಣೆ ನೀಡುವುದಾಗಿ ಮಧ್ಯಂತರ ಆದೇಶದಲ್ಲಿ ಉಲ್ಲೇಖಿಸಿತ್ತು.

ಈ ಬಗ್ಗೆ ಹೆಚ್ಚುವರಿ ಅಡ್ವೋಕೇಟ್ ಜನರಲ್ ಅವರಿಂದ ಸ್ಪಷ್ಟೀಕರಣ ಪಡೆದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಡಿ.21 ಮತ್ತು 22ರಂದು ಚಲನಾದೇಶ ಹೊರಡಿಸಿತ್ತು. ಕೆಲವರನ್ನು ವರ್ಗಾವಣೆ ಆದೇಶದಂತೆ ಕಚೇರಿಗೆ ಹೋಗುವಂತೆ ಸೂಚಿಸಿತ್ತು.

ಇದನ್ನು ಪ್ರಶ್ನಿಸಿ ಡಿ.30ರಂದು ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಪೀಠ, ಚಲನಾದೇಶದ ಬಗ್ಗೆ ಅರ್ಜಿದಾರರು ಗಮನ ಸೆಳೆದಿದ್ದಾರೆ. ಅರ್ಜಿದಾರರಿಗೆ ಹಿಂದಿನ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಲಾಗಿನ್ ರುಜುವಾತು ನೀಡಬೇಕು. ಮೊದಲಿನಂತೆ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net