

ವಿಕಲಾಂಗರ ಸಬಲೀಕರಣಕ್ಕೆ ಹಲವು ಕಾರ್ಯಕ್ರಮ ರೂಪಿಸಿದ್ದೇವೆ, ಅವರ ಅಭಿವೃದ್ಧಿಗೆ ಬದ್ಧರಾಗಿದ್ದೇವೆ ಎಂದು ತನ್ನ ಬೆನ್ನು ತಾನೇ ಚಪ್ಪರಿಸಿಕೊಳ್ಳುವ ರಾಜ್ಯ ಸರ್ಕಾರವು ಅಂಗವಿಕಲರಿಗಾಗಿ ಮೀಸಲಿಟ್ಟ ಅನುದಾನದಲ್ಲಿ ಶೇಕಡ 80ರಷ್ಟು ಕಡಿತಗೊಳಿಸಿದೆ. ಇದು ನಿಜಕ್ಕೂ ಆಘಾತಕಾರಿ ಸಂಗತಿಯೇ ಹೌದು. ನಿನ್ನೆಯಷ್ಟೇ (ಡಿಸೆಂಬರ್ 3) ಅಂಗವಿಕಲರ ದಿನವನ್ನು ಆಚರಿಸಿ ಅವರ ಸಾಧನೆ, ಕೊಡುಗೆಗಳನ್ನು ಶ್ಲಾಘಿಸಲಾಗಿದೆ. ಮತ್ತೊಂದೆಡೆ, ವಿಕಲಾಂಗರ ಘನತೆಯ ಬದುಕಿಗೆ ಪೂರಕವಾಗುವ ಸೌಲಭ್ಯಗಳನ್ನು ಒದಗಿಸಲು ಸರ್ಕಾರದ ಬಳಿ ಅನುದಾನವೇ ಇಲ್ಲದಂಥ ಪರಿಸ್ಥಿತಿ ಇದೆ.
ಶ್ರವಣ ಸಾಧನ, ಬ್ರೖೆಲ್ ಕಿಟ್ಗಳು, ಬ್ಯಾಟರಿಚಾಲಿತ ವೀಲ್ಚೇರ್, ಟಾಕಿಂಗ್ ಲ್ಯಾಪ್ಟಾಪ್ ಮುಂತಾದವುಗಳನ್ನು ನೀಡಲು ಮೀಸಲಿರಿಸಿದ್ದ ಹಣ ಇದು. ಕಳೆದ ವರ್ಷ 53 ಕೋಟಿ ರೂ. ಇದ್ದ ವಿಕಲಾಂಗರ ಅನುದಾನವನ್ನು ಈ ವರ್ಷದ ಬಜೆಟ್ನಲ್ಲಿ 10 ಕೋಟಿ ರೂ.ಗೆ ಇಳಿಸಿದ್ದು, ಶೇಕಡ 80ರಷ್ಟು ಕಡಿತಗೊಳಿಸಲಾಗಿದೆ.
ಅಂಗವಿಕಲರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅನುದಾನವನ್ನು ಹೆಚ್ಚಿಸಬೇಕೇ ವಿನಃ ಕಡಿಮೆ ಮಾಡಬಾರದು. ಇದು ರಾಜ್ಯ ಸರ್ಕಾರವು ವಿಕಲಾಂಗರಿಗೆ ಮಾಡಿದ ಅನ್ಯಾಯವಲ್ಲದೆ ಬೇರೇನೂ ಅಲ್ಲ. ಅಂಗವಿಕಲರ ಅನುದಾನವನ್ನು ಸರ್ಕಾರ ‘ಗ್ಯಾರಂಟಿ’ ಯೋಜನೆಗಳಿಗೆ ಖರ್ಚು ಮಾಡುತ್ತಿದೆ ಎಂದು ರಾಷ್ಟ್ರೀಯ ಅಂಗವಿಕಲರ ಫೆಡರೇಷನ್ ಗಂಭೀರ ಆರೋಪ ಮಾಡಿದೆ. ಹಲವು ಇಲಾಖೆಗಳ ಅನುದಾನವನ್ನು ಕಡಿಮೆ ಮಾಡಿ, ಆ ಮೊತ್ತವನ್ನು ‘ಗ್ಯಾರಂಟಿ’ಗಳಿಗೆ ಬಳಸುತ್ತಿರುವುದು ಗೊತ್ತಿರುವಂಥದ್ದೇ. ಆದರೆ, ಅಂಗವಿಕಲರ ಕಲ್ಯಾಣಕ್ಕೆ ಉಪಯೋಗಿಸಬೇಕಾದ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸುವುದು ಖಂಡನೀಯ. ಯಾವುದೇ ಯೋಜನೆಯನ್ನು ಪೂರ್ವಸಿದ್ಧತೆ ಇಲ್ಲದೆ, ಹಣಕಾಸಿನ ಸಂಪನ್ಮೂಲವನ್ನು ಕ್ರೋಡೀಕರಿಸದೆ ಜಾರಿಗೆ ತಂದರೆ ಅದು ಇಡೀ ವ್ಯವಸ್ಥೆಗೆ ತೊಂದರೆ ತಂದೊಡ್ಡುತ್ತದೆ.
ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂದರೆ ನೆರವು ಬಯಸಿದ ಸಾವಿರಾರು ಅರ್ಜಿಗಳ ಪೈಕಿ ಬೆರಳೆಣಿಕೆಯಷ್ಟು ಅಂಗವಿಕಲರಿಗೆ ಮಾತ್ರ ನೆರವು ಸಿಗುತ್ತಿದೆ. ಉಳಿದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ಇದರಿಂದ ಅಂಗವಿಕಲರು ನೆರವಿಗಾಗಿ ಪರಿತಪಿಸುವಂತಾಗಿದೆ. 2023-24ರ ಹಣಕಾಸು ವರ್ಷದಲ್ಲಿ 4 ಸಾವಿರ ಫಲಾನುಭವಿಗಳಿಗೆ ಯಂತ್ರ (ಬ್ಯಾಟರಿ)ಚಾಲಿತ ದ್ವಿಚಕ್ರ ವಾಹನ, 411 ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ಟಾಪ್, 520 ಜನರಿಗೆ ಗಾಲಿಕುರ್ಚಿ, 183 ದೃಷ್ಟಿಹೀನರಿಗೆ ಬ್ರೖೆಲ್ಕಿಟ್, 179 ಫಲಾನುಭವಿಗಳಿಗೆ ಹೊಲಿಗೆಯಂತ್ರಗಳನ್ನು ವಿತರಿಸಲಾಗಿತ್ತು. ಇದಕ್ಕಾಗಿ 54 ಕೋಟಿ ರೂ. ವೆಚ್ಚ ಮಾಡಲಾಗಿತ್ತು. ಆದರೆ, ಈ ಬಾರಿ ಅನುದಾನ ಕಡಿತವಾಗಿರುವುದರಿಂದ ಈ ಯಾವುದೇ ಸೌಕರ್ಯಗಳು ವಿಕಲಾಂಗರಿಗೆ ಸಿಗುತ್ತಿಲ್ಲ. ಇದರಿಂದ ರೋಸಿಹೋಗಿರುವ ಅಂಗವಿಕಲರು ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದಾರೆ. ಸರ್ಕಾರ ಕೂಡಲೇ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿ, ಅಂಗವಿಕಲರಿಗೆ ಸಲ್ಲಬೇಕಾದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸಿಕೊಡಬೇಕು. ವಿಕಲಾಂಗರು ಹಲವು ಬಗೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವರ ಬದುಕಿಗೆ ಭರವಸೆಯನ್ನು, ಜತೆಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಬೇಕಿದೆ. ಹೀಗಿರುವಾಗ ಅನುದಾನವನ್ನು ಹೆಚ್ಚಿಸಬೇಕೆ ಹೊರತು ಕಡಿತಗೊಳಿಸುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ.