ಆರೋಗ್ಯ ಕೇಂದ್ರಕ್ಕೆ ಮೂಲಸೌಕರ್ಯ ನೀಡಿ

01BTP02
ಬೆಟ್ಟದಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪೂಜಾ ಮಾತನಾಡಿದರು.
Published on

ಬೆಟ್ಟದಪುರ: ಬೆಟ್ಟದಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಇತ್ತೀಚೆಗೆ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ(ಕೆಡಿಪಿ) ಪ್ರಗತಿ ಪರಿಶೀಲನೆ ಸಭೆ ಆಯೋಜಿಸಲಾಗಿತ್ತು.

ಸಭೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪೂಜಾ ಮಾತನಾಡಿ, ಬೆಟ್ಟದಪುರ ಆರೋಗ್ಯ ಕೇಂದ್ರದಲ್ಲಿ ಮೂಲಸೌಕರ್ಯಗಳ ಕೊರತೆಗಳಿವೆ. ಆಂಬುಲೆನ್ಸ್ ಇಲ್ಲ, ಸಾರ್ವಜನಿಕರಿಗೆ ಶೌಚಗೃಹ ಇಲ್ಲ, ಎರಡು ವರ್ಷದಿಂದ ಆಸ್ಪತ್ರೆ ನಿರ್ವಹಣೆಗೆ ಅನುದಾನ ಬಂದಿಲ್ಲ. ಆಸ್ಪತ್ರೆ ಸುರಕ್ಷತಾ ದೃಷ್ಟಿಯಿಂದ ಇತ್ತೀಚೆಗೆ ಸಿಸಿ ಕ್ಯಾಮರಾ ಹಾಕಿಸಲಾಗಿದೆ. ಸಕಾಲದಲ್ಲಿ ಸೇವೆ ನೀಡುತ್ತ ಇದ್ದರೂ ಕೆಲವರು ನನಗೆ ಏಕವಚನದಲ್ಲಿ ಕೆಲವರು ಮಾತನಾಡುತ್ತಾರೆ. ಇನ್ನೂ ಕೆಲವರು ಕುಡಿದು ರಾತ್ರಿ ಸಮಯದಲ್ಲಿ ಫೋನ್ ಮಾಡಿ ಬಿಪಿ, ಶುಗರ್ ಚೆಕ್ ಮಾಡಿ ಎಂದು ಹೇಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಆರೋಗ್ಯ ಕೇಂದ್ರಕ್ಕೆ ಮತ್ತೊಬ್ಬರು ವೈದ್ಯರ ಅವಶ್ಯಕತೆ ಇದೆ. ಆದ್ದರಿಂದ ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಒತ್ತು ನೀಡಿ ಇನ್ನೊಬ್ಬ ವೈದ್ಯರನ್ನು ನೇಮಕ ಮಾಡಿಸಬೇಕಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಇಲಾಖೆ ಮೇಲ್ವಿಚಾರಕಿ ಸಿ.ಆರ್.ಸವಿತಾ ಮಾತನಾಡಿ, ಮಹಿಳೆ ಮತ್ತು ಮಕ್ಕಳ ಸಾಗಣೆ ತಡೆಗಟ್ಟಲು ಮೂರು ತಿಂಗಳಿಗೊಮ್ಮೆ ಅರಿವು ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಕಂಡುಬಂದರೆ ಸಾಂತ್ವನ ಕೇಂದ್ರ ಮತ್ತು ಇಲಾಖೆ ಕೂಡ ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನ ನಡೆಸುತ್ತೇವೆ. ಬಾಲ್ಯ ವಿವಾಹದ ತಡೆಗೆ ಕುಟುಂಬದ ಸದಸ್ಯರಿಗೆ ಅರಿವು ಇರಬೇಕು ಎಂದು ಹೇಳಿದರು.

ಗ್ರಾ.ಪಂ. ಅಧ್ಯಕ್ಷ ರಾಜಶೇಖರ್, ಉಪಾಧ್ಯಕ್ಷೆ ರೇಖಾ, ಸದಸ್ಯ ರಾಜು, ಗ್ರಾಮೀಣ ಮತ್ತು ನೀರು, ನೈರ್ಮಲ್ಯ ಇಲಾಖೆ ಸಹಾಯಕ ಇಂಜಿನಿಯರ್ ಹಿತೇಶ್, ಹಿರಿಯ ಆರೋಗ್ಯ ನಿರೀಕ್ಷಕ ಕುಮಾರ್, ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಕರೀಗೌಡ, ಪಶು ವೈದ್ಯಕೀಯ ಪರೀಕ್ಷಕ ಮಂಜುನಾಥ್, ಪಿಡಿಒ ಮಂಜುನಾಥ್, ಕಾರ್ಯದರ್ಶಿ ಪಾಂಡು, ಎಸ್‌ಡಿಎಎ ಶ್ರೀನಿಧಿ, ಡಿಇಒ ದೀಪು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net