ಬುಡಕಟ್ಟು ಸಮುದಾಯಕ್ಕೆ ಸೌಲಭ್ಯ ತಲುಪಿಸಿ : ಮೈಸೂರು ಜಿ.ಪಂ. ಮುಖ್ಯ ಯೋಜನಾಧಿಕಾರಿ ಕೆ.ಬಿ. ಪ್ರಭುಸ್ವಾಮಿ

Published on

ಮೈಸೂರು: ಸರ್ಕಾರ ಬುಡಕಟ್ಟು ಜನರಿಗೆ ಅನೇಕ ಸವಲತ್ತುಗಳನ್ನು ನೀಡಿದ್ದರೂ ಸಹ ಸರಿಯಾಗಿ ಸದುಪಯೋಗ ಪಡಿಸಿಕೊಳ್ಳದೆ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಆಗಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಕೆ.ಬಿ. ಪ್ರಭುಸ್ವಾಮಿ ಬೇಸರ ವ್ಯಕ್ತಪಡಿಸಿದರು.

ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಕರ್ಮಯೋಗಿ ಅಭಿಯಾನದಡಿ ತಾಲೂಕು ಮಟ್ಟದ ಮಾಸ್ಟರ್ ತರಬೇತಿದಾರರಿಗೆ ಮಂಗಳವಾರ ಆಯೋಜಿಸಿದ್ದ 2 ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಎಲ್ಲ ಇಲಾಖೆ ಅಧಿಕಾರಿಗಳು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಬುಡಕಟ್ಟು ಜನರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ರಾಜ್ಯಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪನಿರ್ದೇಶಕಿ ಬಿ.ಎಸ್. ಪ್ರಭಾ ಮಾತನಾಡಿ, ಇಲಾಖೆಗಳಲ್ಲಿ ಬುಡಕಟ್ಟು ಸಮುದಾಯದ ಏಳಿಗೆಗೆ ಇರುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಟಿಎಸ್‌ಪಿ ಯೋಜನೆಯಲ್ಲಿ ಇರುವ ಕಾರ್ಯಕ್ರಮಗಳನ್ನು ಬುಡಕಟ್ಟು ಸಮುದಾಯದ ಜನರಿಗೆ ತಲುಪಿಸಿ ಅವರ ಏಳಿಗೆಗೆ ಶ್ರಮಿಸಬೇಕು ಎಂದರು.

ಪರಿಶಿಷ್ಟವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎಂ.ಕೆ. ಮಲ್ಲೇಶ್ ಮಾತನಾಡಿ, ಈ ಅಭಿಯಾನದಲ್ಲಿ ಎಲ್ಲ ರೀತಿಯ ಅಧಿಕಾರಿಗಳು ಪರಿಚಯವಾಗುತ್ತಾರೆ. ಮುಂದಿನ ದಿನದಲ್ಲಿ 64 ಹಾಡಿಗಳಲ್ಲಿ ತರಬೇತಿ ನೀಡಬೇಕಾಗುತ್ತದೆ. ಈ ಕಾರ್ಯಾಗಾರವನ್ನು ಸದುಪಯೋಗಪಡಿಸಿಕೊಂಡು ಬುಡಕಟ್ಟು ಜನರಿಗೆ ಕೊಡುಗೆ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಗ್ರಾಮೀಣ ಅಭಿವೃದ್ಧಿ ಇಲಾಖೆ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಈ ಸಂದರ್ಭ ಕೇಂದ್ರ ಬುಡಕಟ್ಟು ಸಂಸ್ಥೆಯ ಸಂಶೋಧನಾಧಿಕಾರಿ ಸುನುಮಿ ಚಾಂಗ್ನಿ, ಅರುಣ್ ಪ್ರಭು, ಜಿ.ಆರ್. ಮಹೇಶ್, ಪದ್ಮಾವತಿ ಬೆಲ್ಲಾಳ, ಚಂದ್ರಶೇಖರ ಅಕ್ಕಮಹಾದೇವಿ, ರಘುನಾಥ್, ಮಹೇಂದ್ರ, ಅಭಿಷೇಕ್, ಲೆಕ್ಕಾಧಿಕಾರಿ ಬಿ.ಆರ್. ಭವ್ಯಾ, ಕೋಮಲಾ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net