ಶಿವಮೊಗ್ಗ: ಸಫಾಯಿ ಕರ್ಮಚಾರಿ(ಮ್ಯಾನುಯಲ್ ಸ್ಕಾೃವೆಂಜರ್ಸ್)ಗಳಿಗೆ ಸಕಾಲಕ್ಕೆ ವೇತನ, ಸಮವಸ್ತ್ರ ಸೇರಿ ಪರಿಕರಗಳ ವಿತರಣೆ, ಆರೋಗ್ಯ ವಿಮೆ, ಇಎಸ್‌ಐ ಸೌಲಭ್ಯ, ಗೃಹ ಭಾಗ್ಯ ಯೋಜನೆಯಡಿ ಮನೆಗಳನ್ನು ಕಲ್ಪಿಸಿರುವುದು ಸೇರಿ ಯಾವುದೇ ಮಾಹಿತಿ ಸಮರ್ಪಕವಾಗಿಲ್ಲ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಕಾರ್ಯದರ್ಶಿ ಚಂದ್ರಕಲಾ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ಮ್ಯಾನುಯಲ್ ಸ್ಕಾೃವೆಂಜರ್ಸ್‌ಗಳಿಗೆ ಕಲ್ಪಿಸುತ್ತಿರುವ ವಿವಿಧ ಸೌಲಭ್ಯಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಆಯೋಗದ ಅಧಿಕಾರಿಗಳು ಬರುತ್ತಾರೆ, ಹೋಗುತ್ತಾರೆ. ಏನೂ ಮಾಡಲ್ಲ ಎಂಬ ನಿರ್ಲಕ್ಷೃ ಸ್ಥಳೀಯ ಸಂಸ್ಥೆಗಳ ಅಧಿಕಾರಿ ವರ್ಗದಲ್ಲಿದೆ. ಯಾವುದೇ ಮಾಹಿತಿ ಸಮರ್ಪಕವಾಗಿಲ್ಲ. ಕೆಲವರು ತಪ್ಪು ಮಾಹಿತಿ ನೀಡುತ್ತಿದ್ದರೆ, ಇನ್ನೂ ಕೆಲವರು ಮಾಹಿತಿಯನ್ನೇ ಕೊಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
2017, 2022 ಮತ್ತು 2023ರಲ್ಲಿ ಮೂರು ಬಾರಿ ಆಯೋಗದಿಂದ ಪ್ರಗತಿ ಪರಿಶೀಲನೆ ನಡೆಸಲಾಗಿದೆ. ಆದರೆ ಇಲ್ಲಿವರೆಗೂ ನಡೆಸಿದ ಸಭೆಗಳ ನಡಾವಳಿಗೆ ಅನುಪಾಲನಾ ವರದಿಯನ್ನೇ ಸಲ್ಲಿಸಿಲ್ಲ. ಇಷ್ಟೊಂದು ನಿರ್ಲಕ್ಷೃ ಒಳ್ಳೆಯದಲ್ಲ. ಇದೀಗ ಹೊಸ ಮೊಬೈಲ್ ಆ್ಯಪ್ ಅನ್ನು ಸಿದ್ಧಪಡಿಸುತ್ತಿದ್ದು, ಇನ್ನೆರಡು ತಿಂಗಳಲ್ಲಿ ಆ್ಯಪ್ ಕಾರ್ಯನಿರ್ವಹಿಸಲಿದೆ. ಈ ಮೂಲಕ ನಿಖರ ಮಾಹಿತಿಯನ್ನು ಅಧಿಕಾರಿಗಳು ನೀಡಬೇಕಾಗುತ್ತದೆ ಎಂದು ಹೇಳಿದರು.
ಸಫಾಯಿ ಕರ್ಮಚಾರಿಗಳು ಊರೂರು ಸ್ವಚ್ಛಗೊಳಿಸುತ್ತಾರೆ. ನಮ್ಮ ಆರೋಗ್ಯವನ್ನು ಕಾಪಾಡಲು ಶ್ರಮಿಸುತ್ತಾರೆ. ಆದರೆ ಅವರ ಆರೋಗ್ಯದ ಬಗ್ಗೆ ಅಧಿಕಾರಿಗಳು ಗಮನ ಕೊಡುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಖುದ್ದು ಪರಿಶೀಲನೆ ವೇಳೆ ಸಾಕಷ್ಟು ಲೋಪಗಳು ಕಂಡುಬಂದಿದೆ. ಸರಿಯಾಗಿ ಸಮವಸ್ತ್ರ ವಿತರಿಸುತ್ತಿಲ್ಲ. ಸಫಾಯಿ ಕರ್ಮಚಾರಿಗಳು ಕೈಕವಚ(ಹ್ಯಾಂಡ್ ಗ್ಲೌಸ್), ಮಾಸ್ಕ್ ಧರಿಸುತ್ತಿಲ್ಲ. ಮೇಸ್ತ್ರಿಗಳು, ಆಯಾ ವಾರ್ಡ್‌ಗಳ ಆರೋಗ್ಯ ನಿರೀಕ್ಷಕರು ಇದನ್ನು ಗಮನಿಸುತ್ತಿಲ್ಲ. ಇನ್ಮುಂದೆ ಸ್ಥಳದಲ್ಲಿ ಖುದ್ದು ಹಾಜರಿದ್ದು ಮೂಲಸೌಕರ್ಯ ಪರಿಶೀಲಿಸುವಂತೆ ಸೂಚಿಸಿದರು. ಜಿಪಂ ಉಪ ಕಾರ್ಯದರ್ಶಿ ಜಯಲಕ್ಷ್ಮೀ, ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ, ಆಯೋಗದ ಅಧಿಕಾರಿ ರಾಘವೇಂದ್ರ ಉಪಸ್ಥಿತರಿದ್ದರು.