

ಎಚ್.ಡಿ.ಕೋಟೆ: ಗ್ರಾಮಗಳಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್ ಶ್ರೀನಿವಾಸ್ ಸೂಚಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಂಕ್ರಾಮಿಕ ರೋಗಗಳ ಬಗ್ಗೆ ಪಿಡಿಒಗಳಿಗೆ ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಮಾತನಾಡಿದರು.
ಜನರು ಹೆಚ್ಚು ಶುದ್ಧ ನೀರನ್ನು ಕುಡಿಯಬೇಕು ಮತ್ತು ಹೊರಗಡೆ ಆಹಾರ ತಿನ್ನುವುದನ್ನು ಕಡಿಮೆ ಮಾಡಬೇಕು. ಕೆಲವು ತಾಲೂಕಿನಲ್ಲಿ ಸಾಂಕ್ರಾಮಿಕ ರೋಗಗಳು ಕಾಣಸಿಕೊಂಡಿವೆ. ಇವು ಕಲುಷಿತ ನೀರು ಅಥವಾ ಆಹಾರಗಳಿಂದ ಬರುತ್ತದೆ. ಆದ್ದರಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಟಿ. ರವಿಕುಮಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಸಾಂಕ್ರಾಮಿಕ ರೋಗಗಳಾದ ವಾಂತಿ ಭೇದಿ, ಕಾಲರಾ, ಡೆಂಘೆ ಮತ್ತು ಚಿಕೂನ್ ಗುನ್ಯಾ ಜ್ವರ ಸೇರಿದಂತೆ ಇನ್ನಿತರ ಸಾಂಕ್ರಾಮಿಕ ರೋಗಗಳ ಹರಡುವಿಕೆ ಕಂಡುಬರುತ್ತಿದೆ. ಆದ್ದರಿಂದ ಎಲ್ಲಾ ಗ್ರಾಮಗಳಲ್ಲಿ ಜನರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಬೇಕು. ಹದಿನೈದು ದಿನಗಳಿಗೊಮ್ಮೆ ನೀರಿನ ಟ್ಯಾಂಕನ್ನು ಸ್ವಚ್ಛಗೊಳಿಸಿ ಕ್ಲೋರಿನೇಷನ್ ಮಾಡಿಸಬೇಕು. ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಧರಣೀಶ್ ಮಾತನಾಡಿ, ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮದ ಜನತೆಗೆ ಶುದ್ಧ ಕುಡಿಯುವ ನೀರನ್ನೇ ಒದಗಿಸಬೇಕು. ಯಾವುದೇ ಪೈಪ್‌ಗಳು ಹೊಡೆದರೆ ತಕ್ಷಣ ಅದನ್ನು ಸರಿಪಡಿಸಬೇಕು. ನೀರಿನ ಟ್ಯಾಂಕನ್ನು ಸ್ವಚ್ಛಗೊಳಿಸಿ ಕ್ಲೋರಿನೇಷನ್ ಮಾಡಬೇಕು. ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಎಇಇ ಗೋವಿಂದ ರಾಜು, ಟಿಪಿಒ ರಂಗಸ್ವಾಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇತರರಿದ್ದರು.