

ಶಿವಮೊಗ್ಗ: ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿರುವ ಕೆರೆಗಳ ವಾಸ್ತವ ಸ್ಥಿತಿ, ಒತ್ತುವರಿ ಆಗಿರುವ, ಒತ್ತುವರಿ ತೆರವಾದ ಕೆರೆಗಳು, ಅವುಗಳ ಆಕಾರ, ಚಕ್ಕುಬಂದಿ, ಸರ್ವೇ ನಂಬರ್, ವಿಸ್ತೀರ್ಣ ಮುಂತಾದ ಮಾಹಿತಿ ಒಳಗೊಂಡ ವರದಿ ನೀಡುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚಿಸಿದರು.
ಕೆರೆ ನಿರ್ವಹಣೆ, ರಕ್ಷಣೆ ಮತ್ತು ಅಭಿವೃದ್ಧಿ ಕುರಿತು ಸೋಮವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ನೀರಾವರಿ ನಿಗಮ, ನಗರ ಯೋಜನಾ ಪ್ರಾಧಿಕಾರ, ಸ್ಥಳೀಯ ಸಂಸ್ಥೆಗಳು ಹಾಗೂ ಅರಣ್ಯ ಇಲಾಖೆ ವ್ಯಾಪಿಯ ಕೆರೆಗಳ ವಾಸ್ತವ ಸ್ಥಿತಿಯ ವರದಿ ಕೊಡಿ ಎಂದು ತಿಳಿಸಿದರು.
ಸಿಎಂ ಹಾಗೂ ನೀರಾವರಿ ಸಚಿವರು ಕೆರೆಗಳ ವಿಸ್ತೃತ ಮಾಹಿತಿ ಕೋರಿದ್ದಾರೆ. ಕ್ಷೀಣಿಸುತ್ತಿರುವ ಅಂತರ್ಜಲ ಮರುಪೂರಣ ಮಾಡುವುದು, ಪರಿಸರಾತ್ಮಕ ಪ್ರಭಾವಗಳ ನಿರ್ಧರಣಾ ಅಧ್ಯಯನ ಸೇರಿ ಅವುಗಳ ವ್ಯವಸ್ಥಿತ ನಿರ್ವಹಣೆಗೆ ಸಹಕಾರಿಯಾಗುವ ಮಾಹಿತಿ ನೀಡಬೇಕೆಂದರು.
ಕೆರೆ-ಕಟ್ಟೆಗಳನ್ನು ಸಂರಕ್ಷಿಸಿ, ಅಭಿವೃದ್ಧಿಪಡಿಸಿ ಮೂಲ ಸ್ಥಿತಿಗೆ ತರಲು ಸಹಕರಿಸಬೇಕು. ಇರುವ ಭೌಗೋಳಿಕ ಮಾಹಿತಿಯೊಂದಿಗೆ ಕೆರೆಗಳು ಮತ್ತು ಸುತ್ತಮುತ್ತಲ ಪ್ರದೇಶಗಳ ಪರಿಸರಾತ್ಮಕ ಯೋಜನೆ ಮತ್ತು ನಕ್ಷೆ ರಚನೆಯಂತೆ ಕೆರೆಗಳ ಸಮಗ್ರ ಅಭಿವೃದ್ಧಿಗೆ ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಹೇಳಿದರು.
ಈಗಾಗಲೇ ಗುರುತಿಸಿರುವ ಕೆರೆಗಳ ಒತ್ತುವರಿ ತೆರೆವುಗೊಳಿಸಬೇಕು. ಅಗತ್ಯವಿದ್ದಲ್ಲಿ ಪೊಲೀಸ್ ಇಲಾಖೆ ಸಹಕಾರ ಪಡೆಯಬೇಕು. ತಹಸೀಲ್ದಾರರು, ನಗರ ಯೋಜನಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯ ಕೆರೆಗಳನ್ನು ಗುರುತಿಸಬೇಕು. ಅವುಗಳ ಸರ್ವೇ ಕಾರ್ಯಕ್ಕೆ ಮುಂದಾಗಬೇಕು. ಸ್ಥಳೀಯರ ಸಹಕಾರದೊಂದಿಗೆ ಒತ್ತುವರಿ ತೆರವುಗೊಳಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ನಗರಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್ ಮತ್ತಿತರರು ಸಭೆಯಲ್ಲಿದ್ದರು.