

ಜಾಮೀನು ಪಡೆದ ನಂತರ ಮೊದಲ ಬಾರಿಗೆ ಕಾಣಿಸಿಕೊಂಡ ರನ್ಯಾ ರಾವ್.
ತಂದೆಯೊಂದಿಗೆ ವಿಐಪಿ ಶಿಷ್ಟಾಚಾರದ ವಾಹನದಲ್ಲಿ ಆಗಮಿಸಿ ಹಾಸನಾಂಬಾ ದೇವಿಯ ದರ್ಶನ.
ಸಾಮಾನ್ಯ ಭಕ್ತರ ವಲಯದಲ್ಲಿ ವಿಐಪಿ ವ್ಯವಸ್ಥೆ ಬಗ್ಗೆ ಮತ್ತೆ ಆಕ್ರೋಶ ವ್ಯಕ್ತ.
ಹಾಸನ: ದುಬೈನಿಂದ ಅಕ್ರಮ ಚಿನ್ನ ಸಾಗಣೆ ಪ್ರಕರಣದ ಆರೋಪಿ ನಟಿ ರನ್ಯಾ ರಾವ್ ತಮ್ಮ ಕುಟುಂಬದೊಂದಿಗೆ ಹಾಸನಾಂಬಾ ದೇವಿಯ ದರ್ಶನ ಪಡೆದಿದ್ದಾರೆ. ನಿವೃತ್ತ ಡಿಜಿಪಿ ಆಗಿರುವ ತಮ್ಮ ತಂದೆಯೊಂದಿಗೆ ವಿಐಪಿ ಶಿಷ್ಟಾಚಾರದ ವಾಹನದಲ್ಲಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ದುಬೈನಿಂದ ಅಕ್ರಮವಾಗಿ ಬಹುಕೋಟಿ ಚಿನ್ನ ಸಾಗಣೆ ಪ್ರಕರಣದ ಆರೋಪಿ ನಟಿ ಹರ್ಷವರ್ಧಿನಿ ಅಲಿಯಾಸ್ ರನ್ಯಾ ರಾವ್ ಹಾಸನದ ಪ್ರಸಿದ್ಧ ಶ್ರೀ ಹಾಸನಾಂಬಾ ದೇವಿಯ ದರ್ಶನ ಪಡೆದು ಪೂಜೆ ನೆರವೇರಿಸಿರುವುದು ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ನಟಿ ರನ್ಯಾ ರಾವ್ ತಮ್ಮ ಕುಟುಂಬದೊಂದಿಗೆ ಅಧಿಕೃತ ಶಿಷ್ಟಾಚಾರದ ಸೌಲಭ್ಯಗಳನ್ನು ಬಳಸಿಕೊಂಡು ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದಿದ್ದಾರೆ.
ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನದ ಐತಿಹಾಸಿಕ ಹಾಸನಾಂಬೆ ದೇವಿಯ ದರ್ಶನೋತ್ಸವದ ಸಂದರ್ಭದಲ್ಲಿ ನಟಿ ರನ್ಯಾ ರಾವ್ ತಮ್ಮ ತಂದೆ, ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ, ಮಾಜಿ ಡಿಜಿಪಿ ರಾಮಚಂದ್ರ ರಾವ್ ಹಾಗೂ ಕುಟುಂಬದ ಇತರೆ ಸದಸ್ಯರೊಂದಿಗೆ ಆಗಮಿಸಿದ್ದರು.
ಸದ್ಯ ಹಾಸನಾಂಬೆ ದರ್ಶನವನ್ನು ಪಡೆದುಕೊಂಡ ರನ್ಯಾರಾವ್ ವಿರುದ್ಧ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ. ಸಾಮಾನ್ಯ ಭಕ್ತರು ದೇವರ ದರ್ಶನ ಪಡೆಯಲು ಗಂಟೆ ಗಟ್ಟಲೇ ನಿಲ್ಲುತ್ತಾರೆ. ಆದರೆ, ಗಂಭೀರ ಕ್ರಿಮಿನಲ್ ಪ್ರಕರಣವನ್ನು ಹೊತ್ತಿರುವ ನಟಿ, ಸರ್ಕಾರಿ ಶಿಷ್ಟಾಚಾರ ವಾಹನ ಬಳಕೆ ಮಾಡಿ ವಿಶೇಷ ಸೌಕರ್ಯ ಪಡೆದು ದೇವರ ದರ್ಶನ ಪಡೆದುಕೊಳ್ಳೋದು ಸರಿಯೇ?.
ಭಕ್ತರು ಗಂಟೆ ಗಟ್ಟಲೇ ಬಿಸಿಲು, ಚಳಿ ಎನ್ನುವುದನ್ನು ನೋಡದೇ ದೇವಿ ದರ್ಶನಕ್ಕೆ ಮುಂಜಾನೆಯಿಂದಲೂ ಕಾಯುತ್ತಿದ್ದಾರೆ. ಇಂತಹ ಸಮಯದಲ್ಲಿ ತಂದೆಯವರ ಅಧಿಕಾರವನ್ನು ಬಳಸಿಕೊಂಡು ಇಂತಹ ವಿಐಪಿ ವ್ಯವಸ್ಥೆ ಸಿಕ್ಕಿರುವುದು ನಿಜಕ್ಕೂ ಸರಿಯಲ್ಲ ಎಂದಿದ್ದಾರೆ. ಒಟ್ಟಾರೆಯಾಗಿ ಈ ಘಟನೆಯು ಮತ್ತೆ ಧಾರ್ಮಿಕ ಸ್ಥಳದಲ್ಲಿ ವಿಐಪಿ ಸವಲತ್ತು ತಂದಿಟ್ಟ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದೆ, (ಏಜೆನ್ಸೀಸ್).