

ಬೆಂಗಳೂರು: ರಾಜ್ಯದಲ್ಲಿ ಜೂನ್ 10ರ ಒಳಗೆ ಒಳ ಮೀಸಲಾತಿ ಜಾರಿ ಮಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ(Protests if internal reservation is not implemented by June 10)ಎಂದು ಸಂಸದ ಗೋವಿಂದ ಕಾರಜೋಳ(Govinda Karajol), ಮಾಜಿ ಸಂಸದ ನಾರಾಯಣಸ್ವಾಮಿ(Narayanaswamy) ಎಚ್ಚರಿಸಿದರು.
ಒಳ ಮೀಸಲು ವಿಚಾರದಲ್ಲಿ ಸಿಎಂ ಬದ್ಧತೆ ತೋರಿಸಬೇಕು. ಒಳ ಮೀಸಲಾತಿ ಜಾರಿ ಮಾಡುವ ಮೊದಲು ಸರ್ವ ಪಕ್ಷದ ಸಭೆ ನಡೆಸಬೇಕು. ನ್ಯಾ.ನಾಗಮೋಹನ ದಾಸ್ ಅವರ ಜೊತೆ ಸರ್ವ ಪಕ್ಷದ ಸದಸ್ಯರು ಚರ್ಚೆ ನಡೆಸಲು ಅನುವು ಮಾಡಿಕೊಡಬೇಕು ಎಂದು ಬಿಜೆಪಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಉಭಯ ನಾಯಕರು ಆಗ್ರಹಿಸಿದರು.
ಒಳಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ಮಾಡಿ 9 ತಿಂಗಳು ಕಳೆದರೂ ರಾಜ್ಯ ಸರ್ಕಾರ ಒಳಮೀಸಲಾತಿ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ಸಿದ್ದರಾಮಯ್ಯ ಒಳಮೀಸಲಾತಿ ಕೊಡದೇ ಕುಂಟು ನೆಪ ಹೇಳುತ್ತಿದ್ದಾರೆ. ಈಗ ನಾಗಮೋಹನ ದಾಸ್ ಅವರಿಂದ ಗಣತಿ ಮಾಡಿಸುವುದಾಗಿ ಹೇಳುತ್ತಿದ್ದಾರೆ. ಸರ್ಕಾರದ ಬಳಿ ಕಾಂತರಾಜು ವರದಿ ಅಂಕಿ-ಅಂಶಗಳು ಇವೆ. ಅದರ ಆಧಾರದಲ್ಲಿ ಒಳಮೀಸಲಾತಿ ಕೊಡಬೇಕು ಎಂದು ಒತ್ತಾಯಿಸಿದರು.
ನ್ಯಾ.ನಾಗಮೋಹನ ದಾಸ್ ಆಯೋಗ ಮೇ 5ರಿಂದ ಒಳಮೀಸಲಾತಿ ಗಣತಿ ಪ್ರಾರಂಭ ಮಾಡುತ್ತಿದೆ. ಇದಕ್ಕೂ ಮೊದಲೇ ಸಿದ್ದರಾಮಯ್ಯ ಜೂನ್ 10ರ ಒಳಗೆ ಮೀಸಲಾತಿ ಕೊಡುತ್ತೇವೆ ಎಂಬ ಭರವಸೆ ಕೊಟ್ಟು ಗಣತಿ ಶುರು ಮಾಡಿಸಬೇಕು ಎಂದರು.
ಬೆಳಗಾವಿ ಅಧಿವೇಶನ ಸಮಯದಲ್ಲಿ ಸಚಿವ ಮಹದೇವಪ್ಪ ಪ್ರತಿಭಟನಾ ಸ್ಥಳಕ್ಕೆ ಬಂದು 3 ತಿಂಗಳ ಒಳಗೆ ಒಳಮೀಸಲಾತಿ ಕೊಡಿಸುತ್ತೇವೆ. ಇಲ್ಲದೇ ಹೋದರೆ ನಾನು ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದರು. ಈಗ ಮೊದಲು ಒಳಮೀಸಲಾತಿ ಕೊಡಿಸಲಿ ಎಂದು ಸವಾಲು ಎಸೆದರು.
ಸಮುದಾಯದ 6 ಮಂತ್ರಿಗಳು ಒಳಮೀಸಲಾತಿ ಕೊಡಿಸಬೇಕು. ಮೀಸಲಾತಿ ಕೊಡಿಸದೇ ಹೋದರೆ ನೀವು ಈ ಸಮಾಜಕ್ಕೆ ದ್ರೋಹ ಮಾಡಿದ ಹಾಗೆ ಆಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.