

ಲಕ್ಷ್ಮೇಶ್ವರ: ಕಬ್ಬು ಕಟಾವು ಮಾಡಿ ತೆಗೆದುಕೊಂಡು ಹೋಗಬೇಕು ಎಂದು ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘದ ತಾಲೂಕು ಘಟಕದ ನೇತೃತ್ವದಲ್ಲಿ ರೈತರು ತಹಸೀಲ್ದಾರ್ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು. ಕಬ್ಬು ಬೆಳೆಗಾರ ರೈತ ಮುಖಂಡ ಬಸವರೆಡ್ಡಿ ಹನುಮರೆಡ್ಡಿ ಮಾತನಾಡಿ, ತಾಲೂಕಿನ 450 ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಮುಂಡರಗಿ ಸಮೀಪದ ವಿಜಯನಗರ (ಗಂಗಾಪುರ) ಸಕ್ಕರೆ ಕಾರ್ಖಾನೆ 14 ತಿಂಗಳ ಹಿಂದೆ ಲಕ್ಷ್ಮೇಶ್ವರ ತಾಲೂಕಿನ ರೈತರಿಂದ ಕಬ್ಬು ನಾಟಿ ಮಾಡಿಸಿದ್ದರು. ಬಳಿಕ ನಾವೇ ಕಟಾವು ಮಾಡಿಸಿಕೊಂಡು ತೆಗೆದುಕೊಂಡು ಹೋಗುತ್ತೇವೆ ಎಂದು ರೈತರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಈಗ ಕಬ್ಬು ಕಟಾವಿನ ಅವಧಿ ಮುಗಿದಿದ್ದು, 5 ಸಾವಿರ ಟನ್ ಕಬ್ಬು ಒಣಗುತ್ತಿದೆ. ಅನೇಕ ಕಡೆ ವಿದ್ಯುತ್ ಅವಘಡ ಸಂಭವಿಸಿ ಹಾಳಾಗುತ್ತಿದೆ. ತೂಕ, ಗುಣಮಟ್ಟ ಕಳೆದುಕೊಳ್ಳುತ್ತಿದೆ. ಕಬ್ಬು ಕಟಾವು ಮಾಡಿಕೊಂಡು ಒಯ್ಯುವಂತೆ ಮನವಿ ಮಾಡಿದರೂ ಕಾರ್ಖಾನೆಯವರು ಸ್ಪಂದಿಸುತ್ತಿಲ್ಲ. ನೆಪ ಹೇಳುವುದನ್ನು ಬಿಟ್ಟು ಕಬ್ಬು ಕಟಾವಿಗೆ ಮುಂದಾಗಬೇಕು. ಇಲ್ಲದಿದ್ದರೆ ಕಾರ್ಖಾನೆ ಮುಂದೆ ಜಿಲ್ಲೆಯ ರೈತರು ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದರು. ಉಪ ತಹಸೀಲ್ದಾರ್ ಪ್ರಶಾಂತ ಕಿಮಾಯಿ ರೈತರಿಂದ ಮನವಿ ಸ್ವೀಕರಿಸಿದರು. ಮುತ್ತಣ್ಣ ಗಡೆಪ್ಪನವರ, ಸುನೀಲ ತೋಟದ, ರಾಮಣ್ಣ ಲಮಾಣಿ (ಶಿಗ್ಲಿ), ಪ್ರಕಾಶ ಹುಲಕೋಟಿ, ಮಂಜುನಾಥ ಲಿಂಗಶೆಟ್ಟಿ, ಶಿವಪ್ಪ ಲಮಾಣಿ, ಮೋಹನ ಜನಿವಾರದ, ರಮೇಶ ಅಣ್ಣಿಗೇರಿ, ಪಕೀರೇಶ ಚಿಕ್ಕಣ್ಣನವರ, ರಾಮರೆಡ್ಡಿ ಕುರ್ತಕೋಟಿ, ವಿಶ್ವನಾಥ ಶಿರಹಟ್ಟಿ, ಮಂಜುನಾಥ ನೀರಲಗಿ, ಸುನೀಲ ಅಣ್ಣಿಗೇರಿ, ಶಿವಪ್ಪ ಲಮಾಣಿ, ಕೃಷ್ಣ ಬಿದರಳ್ಳಿ, ಬಸವರಾಜ ಬಾಳಿಕಾಯಿ, ರಮೇಶ ಅಣ್ಣಿಗೇರಿ, ಪಕೀರೇಶ ಚಿಕ್ಕಣ್ಣವರ ಇತರರಿದ್ದರು.