ಪ್ರತಿಭಟನೆನಿರತ ವಿದ್ಯಾರ್ಥಿ ಕುಸಿದು ಬಿದ್ದು ಸಾವು; ವಿವಿ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ

Crime Symbolic
Published on

ಬೆಂಗಳೂರು: ರಾಜಧಾನಿ ಬೆಂಗಳೂರಿನ ಅಜೀಮ್​ ಪ್ರೇಮ್​ಜಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕುಸಿದು ಬಿದ್ದು ಸಾವಿಗೀಡಾದ ಪ್ರಸಂಗವೊಂದು ನಡೆದಿದೆ. ಪ್ರಥಮ ವರ್ಷದ ಎಂಎ ಡೆವಲಪ್​ಮೆಂಟ್​​ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಅಭಿಷೇಕ್ ಸಾವಿಗೀಡಾದ ವಿದ್ಯಾರ್ಥಿ.

ಹಾಸ್ಟೆಲ್ ಹಾಗೂ ಪ್ರಯಾಣದ ಶುಲ್ಕ ಕಡಿಮೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿರುವ ಅಜೀಮ್ ಪ್ರೇಮ್​​ಜಿ ಯೂನಿವರ್ಸಿಟಿಯ ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಕಳೆದ 12 ದಿನಗಳಿಂದ ಕ್ಯಾಂಪಸ್ ಒಳಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಅದಾಗ್ಯೂ ವಿಶ್ವವಿದ್ಯಾಲಯದವರು ಸ್ಪಂದಿಸಿಲ್ಲ ಎನ್ನಲಾಗಿದೆ.

ಹೀಗಾಗಿ ವಿದ್ಯಾರ್ಥಿಗಳ ಹೋರಾಟ ಸಮಿತಿ ಕಳೆದ ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿತ್ತು. ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವಿದ್ಯಾರ್ಥಿ ಅಭಿಷೇಕ್ ನಿನ್ನೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದು ಸಾವಿಗೀಡಾಗಿದ್ದಾನೆ. ಅಭಿಷೇಕ್ ಸಾವಿಗೆ ಅಜೀಮ್ ಪ್ರೇಮ್​ಜಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ವಿರೋಧಿ ನೀತಿ ಮತ್ತು ಅಲಕ್ಷ್ಯ ಕಾರಣ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಲೇಜು ಆಡಳಿತ ಮಂಡಳಿ ಹೇಳುವುದು ಹೀಗೆ..

ವಿದ್ಯಾರ್ಥಿ ಮಹಾರಾಷ್ಟ್ರ ಮೂಲದವನಾಗಿದ್ದು, ಕಾರ್ಯಕ್ರಮವೊಂದರಲ್ಲಿ ಡ್ಯಾನ್ಸ್ ಪ್ರ್ಯಾಕ್ಟಿಸ್​ ಮಾಡುತ್ತಿದ್ದ ಸಂದರ್ಭದಲ್ಲಿ ಸುಸ್ತಾಗಿ ಬಿದ್ದಿದ್ದ. ಕೂಡಲೇ ಆತನನ್ನು ಸರ್ಜಾಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸೇಂಟ್ ಜಾನ್ಸ್​ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ ಎಂಬುದಾಗಿ ಕಾಲೇಜು ಆಡಳಿತ ಮಂಡಳಿ ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net