ಶನಿವಾರಸಂತೆ: ದುಂಡಳ್ಳಿ, ಬಿಳಹ, ಯಸಳೂರು ರಸ್ತೆ ವಿಸ್ತರಣೆ ಕಾಮಗಾರಿ ಕಾರ್ಯಕ್ಕೆ ಅರಣ್ಯ ಇಲಾಖೆ ರಸ್ತೆ ಬದಿಯ ಮರಗಳನ್ನು ತೆರವುಗೊಳಿಸದಿದ್ದ ಕಾರಣ ಕಾಮಗಾರಿ ಸ್ಥಗಿತಗೊಂಡಿದ್ದ ಹಿನ್ನೆಲೆಯಲ್ಲಿ ಫೆ.15 ರಂದು ಅರಣ್ಯ ಇಲಾಖೆ ಕಚೇರಿಗೆ ಬೀಗ ಜಡಿಯುವುದಾಗಿ ದುಂಡಳ್ಳಿ ಸುಬ್ರಮಣಿ, ಬಿಳಹ ನಾಗಣ, ಎಸ್.ಎನ್.ರಘು ಪ್ರತಿಭಟನಾಕಾರರ ಪರವಾಗಿ ತಿಳಿಸಿದ್ದಾರೆ. 15 ದಿನಗಳ ಹಿಂದೆ ದುಂಡಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು, ಸಾರ್ವಜನಿಕರು ಶನಿವಾರಸಂತೆ ಆರ್‌ಎಫ್‌ಒ ಕಚೇರಿಗೆ ಮುತ್ತಿಗೆ ಹಾಕಿದ್ದರು. ಸಾರ್ವಜನಿಕರ ಪ್ರತಿಭಟನೆ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಒಂದು ವಾರದಲ್ಲಿ ಮರ ತೆರವುಗೊಳಿಸುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಗಡುವು ನೀಡಿ 15 ದಿನಗಳಾದರೂ ಅರಣ್ಯ ಇಲಾಖೆಯವರು ಮರಗಳನ್ನು ತೆರವುಗೊಳಿಸಲು ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಫೆ.15ರಂದು ಅರಣ್ಯ ಇಲಾಖೆ ಕಚೇರಿಗೆ ಬೀಗ ಹಾಕಿ ರಸ್ತೆ ಸಂಚಾರ ತಡೆ ನಡೆಸಲಾಗುವುದೆಂದು ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.