

ಕೋಲಾರ: ಪೌರಕಾರ್ಮಿಕ ಶಿವಕುಮಾರ್ ಆತ್ಮಹತ್ಯೆ ಯತ್ನಕ್ಕೆ ಕಾರಣರಾದ ಆರೋಗ್ಯ ನಿರೀಕ್ಷಕ ನವಾಜ್ ಮತ್ತಿತರರ ವಿರುದ್ಧ ದೂರು ದಾಖಲಿಸಿ ಕ್ರಮಕೈಗೊಳ್ಳಬೇಕೆಂದು ಸೋಮವಾರ ಪೌರ ಕಾರ್ಮಿಕರು ನಗರಸಭೆ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘ ಹಾಗೂ ಪೌರಕಾರ್ಮಿಕರ ಮಹಾ ಸಂಘದ ನೇತೃತ್ವದಲ್ಲಿ ಶಿವಕುಮಾರ್ ಕುಟುಂಬಸ್ಥರು, ಕಾರ್ಮಿಕರು ಪ್ರತಿಭಟನೆ ನಡೆಸಿ, ಅಧಿಕಾರಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.
ಶಿವಕುಮಾರ್ ೨೦ ವರ್ಷಗಳಿಂದ ನಗರಸಭೆಯಲ್ಲಿ ದಿನಗೂಲಿ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ೪ ವರ್ಷಗಳಿಂದ ವಾಹನ ಚಾಲಕರಾಗಿದ್ದರು. ಇತ್ತೀಚೆಗೆ ಪೌರ ಕಾರ್ಮಿಕರಿಗೆ ನೀಡುವ ಉಪಾಹಾರದಲ್ಲಿ ಹುಳ ಸಿಕ್ಕಿದ್ದು, ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿತ್ತು. ಈ ವಿಷಯವನ್ನೇ ಇಟ್ಟುಕೊಂಡು ಚಾಲಕ ಹುದ್ದೆಯಿಂದ ತೆಗೆದು ಪೌರ ಕಾರ್ಮಿಕನಾಗಿ ಮುಂದುವರಿಯುವಂತೆ ತಿಳಿಸಿದ್ದರು. ಮತ್ತೆ ಶಿವಕುಮಾರ ಅದೇ ಕೆಲಸವನ್ನು ಮುಂದುವರಿಸಿದ್ದರು ಎಂದು ಶಿವಕುಮಾರ್ ಪತ್ನಿ ರುಕ್ಮಿಣಿ ತಿಳಿಸಿದರು.
ಪತಿ ಕೆಲಸಕ್ಕೆ ಹಾಜರಾಗಿದ್ದರೂ ನವಾಜ್ ವಿನಾಕರಣ ಹಾಜರಾತಿಯಲ್ಲಿ ಗೈರು ಎಂದು ನಮೂದು ಮಾಡಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ನಿನ್ನ ಕೈಯಲ್ಲಿ ಆಗಿದ್ದನ್ನು ಮಾಡು, ನಾನು ಮಾಡುವುದು ಹೀಗೇ ಎಂದು ಬೆದರಿಕೆ ಹಾಕಿದ್ದಾರೆ. ವೇತನ ಬಾಕಿ ಇದ್ದ ಕಾರಣ ಕುಟುಂಬ ನಿರ್ವಹಣೆ ಕಷ್ಟವಾಗಿತ್ತು, ಅ.೧೦ರಂದು ನಗರಸಭೆಗೆ ಹೋಗಿ ಅಧಿಕಾರಿಗಳನ್ನು ಕೇಳಿದ್ಧಕ್ಕೆ ಏಕವಚನದಲ್ಲಿ ನಿಂದಿಸಿದ್ದಾರೆಂದು ಆರೋಪಿಸಿದರು.
ನವಾಜ್ ಮತ್ತು ಇತರ ಅಧಿಕಾರಿಗಳಿಂದ ಆಗಿರುವ ಅವಮಾನದ ಬಗ್ಗೆ ಶಿವಕುಮಾರ್, ಕುಟುಂಬ ಸದಸ್ಯರೊಂದಿಗೆ ಚರ್ಚೆ ಮಾಡಿದ್ದಾರೆ. ಜತೆಗಾರರ ಎದುರು ಅವಮಾನ ಮಾಡಿರುವುದು ಮನಸ್ಸಿಗೆ ಬಹಳ ಬೇಜಾರು ತಂದಿದ್ದು, ಇದಕ್ಕೆಲ್ಲ ಕಾರಣ ನವಾಜ್ ಎಂದು ತಿಳಿಸಿದ್ದಾರೆ ಎಂದರು.
ಪೌರಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ, ಪೌರಕಾರ್ಮಿಕರ ಸಮಸ್ಯೆಗಳು ಎಂದರೆ ಅಽಕಾರಿಗಳಿಗೆ ಗಂಭೀರತೆಯೇ ಇಲ್ಲವಾಗಿದೆ. ಏನೇ ಸಮಸ್ಯೆಗಳ ಬಗ್ಗೆ ಅಽಕಾರಿಗಳ ಗಮನಕ್ಕೆ ತಂದರೆ ಮೇಲಾಧಿಕಾರಿಗಳಿಗೆ ತಿಳಿಸುವುದಾಗಿ ಹೇಳುತ್ತಾರೆ. ಯಾವುದೇ ಸಮಸ್ಯೆಗಳು ಬಗೆಹರಿಯುವುದೇ ಇಲ್ಲ ಎಂದು ದೂರಿದರು.
ಅಧಿಕಾರಿಗಳ ನಿರ್ಲಕ್ಷ್ಯಯದಿಂದ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ. ಅಽಕಾರಿಗಳು ಸಕಾಲಕ್ಕೆ ಕಾರ್ಮಿಕರಿಗೆ ವೇತನ ನೀಡಿದರೆ ಸಾಕು, ಯಾವ ಕಾರಣಕ್ಕಾಗಿ ತಡ ಮಾಡುತ್ತಾರೊ ಗೊತ್ತಾಗುತ್ತಿಲ್ಲ. ನವಾಜ್ ಬಂದ ಮೇಲೆ ನಗರಸಭೆ ಹಿಡಿತ ಕೈ ತಪ್ಪಿದೆ. ನಗರಸಭೆಯಲ್ಲಿ ಯಾರು ಯಜಮಾನರು ಎಂಬುದು ಗೊತ್ತಾಗುತ್ತಿಲ್ಲ. ಶಿವಕುಮಾರ್ ಕುಟುಂಬಸ್ಥರು ಠಾಣೆಗೆ ದೂರು ನೀಡಿ ವಾರ ಕಳೆದರೂ ಇದುವರೆಗೆ ಎಫ್‌ಐಆರ್ ದಾಖಲಾಗಿಲ್ಲ. ಪೊಲೀಸರು, ಅಽಕಾರಿಗಳು ಯಾರನ್ನು ರಕ್ಷಣೆ ಮಾಡಲು ಹೊರಟಿದ್ದಾರೆ ಎಂದು ಪ್ರಶ್ನಿಸಿದರು.
ಪ್ರತಿಭಟನಾ ಸ್ಥಳಕ್ಕೆ ಪೌರಕಾಯುಕ್ತ ಶಿವಾನಂದ ಭೇಟಿ ನೀಡಿ ಮನವೊಲಿಸಲು ಪ್ರಯತ್ನಿಸಿ, ಪ್ರತಿಭಟನೆ ಕೈಬಿಡಿ, ಮೇಲಽಕಾರಿಗಳ ಗಮನಕ್ಕೆ ತಂದು ಬಗೆಹರಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು. ಇದರಿಂದ ಕೆರಳಿದ ಪ್ರತಿಭಟನಾಕಾರರು, ಬಹಳ ಬುದ್ಧಿವಂತಿಕೆಯಿಂದ ಮಾತನಾಡುತ್ತೀರಿ. ಕಾರ್ಮಿಕರಿಗೆ ಏನೂ ತಿಳಿಯುವುದಿಲ್ಲ ಎಂದು ದಾರಿತಪ್ಪಿಸಲು ಹೋಗಬೇಡಿ. ಅಧಿಕಾರಿಗಳ ತಪ್ಪಿನಿಂದ ಶಿವಕುಮಾರ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರುವ ತನಕ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಎಚ್ಚರಿಸಿದರು.