

ಬೆಂಗಳೂರು: ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ಅವರ ನಿಧನಕ್ಕೆ ಮೂರು ದಿನಗಳ ಶೋಕಾಚರಣೆ ಹಿನ್ನೆಲೆಯಲ್ಲಿ ಮತಗಳ್ಳತನ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದ ಪ್ರತಿಭಟನಾ ಸಭೆಯನ್ನು ಆಗಸ್ಟ್ 8ಕ್ಕೆ ಮುಂದೂಡಲಾಗಿದೆ ಎಂದು ಡಿಸಿಎಂ DK ಶಿವಕುಮಾರ್ ತಿಳಿಸಿದರು.
ಸ್ವಾತಂತ್ರ್ಯ ಉದ್ಯಾನದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಸೋಮವಾರ ಮಾತನಾಡಿದರು. ಶಿಬು ಸೊರೇನ್ ಬುಡಕಟ್ಟು ಸಮುದಾಯದ ಹಿರಿಯ ನಾಯಕರು. ಕಾಂಗ್ರೆಸ್ ಪಕ್ಷದ ಬಹುಕಾಲದ ಮೈತ್ರಿ ನಾಯಕರು. ಅವರಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರು ಶಿಬು ಸೊರೇನ್ ಅವರಿಗೆ ಗೌರವ ಸಲ್ಲಿಸಬೇಕು ಎಂದರು.
ಅವರ ಅಂತ್ಯಕ್ರಿಯೆ ಮಂಗಳವಾರ (ನಾಳೆ) ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಆತುರದಲ್ಲಿ ಮಾಡುವುದು ಬೇಡ ಎಂಬ ಕಾರಣಕ್ಕೆ ಈ ತೀರ್ಮಾನಕ್ಕೆ ಬರಲಾಗಿದೆ. ಶೋಕಾಚರಣೆ ಆಚರಿಸುವ ದಿನ ದೇಶಕ್ಕೆ ಒಂದು ಸಂದೇಶ ನೀಡುವ ಕಾರ್ಯಕ್ರಮ ಬೇಡ ಎಂದು ನಿರ್ಧರಿಸಿದ್ದೇವೆ. ಈ ವಿಚಾರವಾಗಿ ನಮ್ಮ ನಾಯಕರ ಜೊತೆ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
“ಆಗಸ್ಟ್ 8ರಂದು ವರಮಹಾಲಕ್ಷ್ಮಿ ಹಬ್ಬವಿದ್ದರೂ ಪಕ್ಷದ ಕೆಲಸಕ್ಕೆ ಆದ್ಯತೆ ನೀಡುತ್ತಿದ್ದೇವೆ. ಹಬ್ಬದ ಪ್ರಯುಕ್ತ ಪೂಜೆ ಮಾಡಲು ಹಾಗೂ ಪ್ರಾರ್ಥನೆ ಮಾಡಲು ನಾವು ಯಾರಿಗೂ ಅಡ್ಡಿಪಡಿಸುವುದಿಲ್ಲ. ಪಕ್ಷದ ಹೋರಾಟಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಮುಖಂಡರು, ಕಾರ್ಯಕರ್ತರಲ್ಲಿ ಮಾಧ್ಯಮಗಳ ಮೂಲಕ ಮನವಿ ಮಾಡಿಕೊಳ್ಳುತ್ತೇನೆ. ಮತ್ತೊಮ್ಮೆ ಶಾಸಕಾಂಗ ಪಕ್ಷದ ಸಭೆ ಕರೆಯಲು ನಮ್ಮ ನಾಯಕರು ಮಾರ್ಗದರ್ಶನ ನೀಡಿದ್ದು, ಸಿಎಂ ಜೊತೆ ಚರ್ಚೆ ಮಾಡುತ್ತೇವೆ” ಎಂದು ಹೇಳಿದರು.