

ತುಮಕೂರು: ‘ದಲಿತರು, ಕೆಲವು ನಾಯಕರು ಹೊಟ್ಟೆಪಾಡಿಗೆ ಬಿಜೆಪಿಯಲ್ಲಿದ್ದಾರೆ’ ಎಂದು ಹೇಳಿಕೆ ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯಕರ್ತರು ನಗರದ ಬಿಜಿಎಸ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ವೈ.ಎಚ್.ಹುಚ್ಚಯ್ಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು, ಸಿದ್ದರಾಮಯ್ಯ ದಲಿತರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ವೈ.ಎಚ್.ಹುಚ್ಚಯ್ಯ ಮಾತನಾಡಿ, ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿ ಸೇರಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ದಲಿತರ ಸ್ವಾಭಿಮಾನ ಕೆಣಕಿದೆ, ರಾಜ್ಯಾದ್ಯಂತ ಬಿಜೆಪಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಸಂವಿಧಾನದ ಆಶಯದಲ್ಲಿ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಚೌಕಟ್ಟಿನಲ್ಲಿ ಇರುವಂತಹ ರಾಜಕೀಯ ಪಕ್ಷ ಆಯ್ಕೆ ಮಾಡಿಕೊಳ್ಳುವ ಅಧಿಕಾರ, ಸ್ವಾತಂತ್ರ್ಯ, ಜನಸಾಮಾನ್ಯರಿಗಿದೆ. ಹಾಗೆ ಕಾಂಗ್ರೆಸ್‌ನಲ್ಲಿಯೂ ಕೆಲವರಿದ್ದರೆ, ಬಿಜೆಪಿ ಮತ್ತು ಇತರ ಪಕ್ಷಗಳನ್ನು ಆಯ್ಕೆ ಮಾಡಿಕೊಳ್ಳಲು ಪ್ರತಿಯೊಬ್ಬರಿಗೂ ಹಕ್ಕಿದೆ ಎಂದರು.
ಸಿದ್ದರಾಮಯ್ಯ ಅವರಿಗೆ ಹುಚ್ಚು ಹಿಡಿದಿದೆ. ಮಾನಸಿಕ ಅಸ್ವಸ್ಥತೆಯಲ್ಲಿರುವ ಸಿದ್ದರಾಮಯ್ಯ ಅವರನ್ನು ಮನೋ ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸುವ ಅಗತ್ಯವಿದೆ ಎಂದು ಹರಿಹಾಯ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ಮಾತನಾಡಿ, ದಲಿತ ಸಮುದಾಯ ಬಿಜೆಪಿಯನ್ನು ನಂಬಿದೆ, ಕಾಂಗ್ರೆಸ್ ಅಂದರೆ ದಲಿತರು, ದಲಿತರು ಅಂದ್ರೆ ಕಾಂಗ್ರೆಸ್ ಎನ್ನುವ ಸಂದರ್ಭ ಒಂದಿತ್ತು, ದಲಿತರನ್ನೇ ಮತ ಬ್ಯಾಂಕ್ ಮಾಡಿಕೊಂಡು ದೇಶವನ್ನು ಆಳುತ್ತಾ ಬಂದಿತ್ತು. ಆದರೆ, ಈಗ ದಲಿತರೂ ಕಾಂಗ್ರೆಸ್ ತೊರೆಯುತ್ತಿದ್ದಾರೆ ಎಂದರು.
ದಲಿತರ ಮೇಲೆ ದೌರ್ಜನ್ಯ: ಸಿದ್ದರಾಮಯ್ಯ ಸಿಎಂ ಆಗಿದ್ದ 5 ವರ್ಷಗಳ ಅವಧಿಯಲ್ಲಿ ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ 9080 ದಲಿತರ ಮೇಲೆ ದೌರ್ಜನ್ಯ ನಡೆದಿವೆ, ಇವು ದಾಖಲಾದ ದೂರುಗಳು ಇನ್ನು ದಾಖಲಾಗದೇ ಇರುವ ದೂರುಗಳೆಷ್ಟೋ?, 358 ದಲಿತರ ಕಗ್ಗೊಲೆಗಳಾಗಿವೆ, 908 ದಲಿತ ಮಹಿಳೆಯರ ಮೇಲೆ ಮಾನಭಂಗ ನಡೆದಿದೆ, ಆಳುತ್ತಿದ್ದ ಸಿಎಂ ದಲಿತ ವಿರೋಧಿಯಾಗಿದ್ದರಿಂದಲೇ ಇಷ್ಟೆಲ್ಲಾ ದಲಿತರ ಮೇಲೆ ದೌರ್ಜನ್ಯಗಳು, ಕಗ್ಗೊಲೆ, ಮಹಿಳೆಯರ ಮಾನಭಂಗದಂತಹ ಕೃತ್ಯಗಳು ನಡೆದಿವೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಚ್.ಎನ್.ಚಂದ್ರಶೇಖರ್ ದೂರಿದರು.