ಭಯೋತ್ಪಾದಕರ ಕೃತ್ಯ ಖಂಡಿಸಿ ಬೇಲೂರಿನಲ್ಲಿ ಪ್ರತಿಭಟನೆ

24blrp1
ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಬಯೋದ್ಪಾದಕರು ನಡೆಸಿದ ಗುಂಡಿನ ದಾಳಿ ಖಂಡಿಸಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಬೇಲೂರಿನ ಬಸವೇಶ್ವರ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.
Published on

ಬೇಲೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿ ಖಂಡಿಸಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿ ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗಿ ಗುರುವಾರ ಪ್ರತಿಭಟಿಸಿದರು.

ಹಿಂದು ಹಾಗೂ ಹನುಮ ಸೇನೆ ಮುಖಂಡ ಎನ್.ಆರ್.ಸಂತೋಷ್ ಮಾತನಾಡಿ, ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ. ಅಲ್ಲಿನ ಪ್ರತ್ಯೇಕವಾದಿ ಮನಸ್ಥಿತಿ ಬದಲಾಯಿಸಲು ಮತ್ತು ಜನರ ಜೀವನ ಉತ್ತಮಪಡಿಸಲು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಕೈಗೊಂಡಿದ್ದರೂ ಭಯೋತ್ಪಾದಕರು, ಪ್ರತ್ಯೇಕವಾದಿಗಳ ನುಸುಳುಕೋರರ ಹಾವಳಿ ನಿಂತಿಲ್ಲ. ಇದರಿಂದಾಗಿಯೇ ಭಯೋತ್ಪಾದಕರು ಪ್ರಾವಾಸಿ ಹಿಂದುಗಳ ಮೇಲೆ ನಡೆಸಿರುವ ಗುಂಡಿನ ದಾಳಿ ಖಂಡನೀಯವಾಗಿದೆ. ನಮ್ಮ ದೇಶದಲ್ಲಿ ಹಿಂದುಗಳು ಭಾರಿ ಪ್ರಮಾಣದಲ್ಲಿದ್ದಾರೆ. ಹಿಂದು ಸಂಘಟನೆ ಮತ್ತು ಹನುಮ ಸೇನೆ ಬಲಿಷ್ಠವಾಗಿದೆ. ನಮ್ಮನ್ನು ಕೆಣಕಿದರೆ ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತೇವೆ. ಭಾರತದಲ್ಲಿನ ಮುಸಲ್ಮಾನರು ಕೆಲ ಮಸೀದಿಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ವಿನಯದ ಬಗ್ಗೆ ಹಾಗೂ ನೈತಿಕತೆಯ ಶಿಕ್ಷಣ ನೀಡಬೇಕೇ ಹೊರತು ಉಗ್ರವಾದ ಕಲಿಸಿದರೆ ಅವರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಸಾಂಕೇತಿಕವಾಗಿ ಇಂದು ಬೇಲೂರಿನ ಬಸವೇಶ್ವರ ವೃತ್ತದಲ್ಲಿ ಟೈರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಈ ಬೆಂಕಿ ಜ್ವಾಲೆ ಉಗ್ರವಾದದ ವಿರುದ್ಧ ಎಲ್ಲೆಡೆ ವ್ಯಾಪಿಸಲಿದೆ ಎಂದು ಎಚ್ಚರಿಸಿದರು.

ಬಜರಂಗದಳ ತಾಲೂಕು ಸಂಚಾಲಕ ನಾಗೇಶ(ಗುಂಡ) ಮಾತನಾಡಿ, ಪಹಲ್ಗಾಮ್‌ನಲ್ಲಿ ಪ್ರವಾಸಿ ತಾಣ ವೀಕ್ಷಿಸಲು ತೆರಳಿದ್ದ ಹಿಂದುಗಳ ಮೇಲೆ ಭಯೋತ್ಪಾದಕರ ಗುಂಡಿನ ದಾಳಿಯನ್ನು ಖಂಡಿಸುತ್ತೇವೆ. ಭಯೋತ್ಪಾದಕರನ್ನು ಹತ್ತಿಕ್ಕಬೇಕು. ಪ್ರಜೆಗಳಿಗೆ ಸುರಕ್ಷತೆ ನೀಡಬೇಕಾದದ್ದು ಸರ್ಕಾರಗಳ ಕರ್ತವ್ಯ. ಪ್ರವಾಸಿಗರು ಹಿಂದುಗಳನ್ನೇ ಟಾರ್ಗೆಟ್ ಮಾಡಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಹಿಂದುಗಳ ಸಹನೆ ಮೀರಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಆದ್ದರಿಂದ ಕೇಂದ್ರ ಸರ್ಕಾರ ಶೀಘ್ರವೇ ಭಯೋತ್ಪಾದಕರ ಹೆಡೆಮುರಿ ಕಟ್ಟಬೇಕು ಎಂದರು.

ಶ್ರೀ ಚನ್ನಕೇಶವಸ್ವಾಮಿ ದೇಗುಲ ಟ್ರಸ್ಟ್ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದ ಮುಖಂಡರಾದ ಮೋಹನ್‌ಕುಮಾರ್, ತೀರ್ಥಂಕರ್, ವೆಂಕಟೇಶ್, ವಿಜಯ್‌ಕುಮಾರ್, ಲೋಕೇಶ್, ನಂಜೇಗೌಡ, ರಜಪೂತ್, ಜೆ.ಕೆ.ಕುಮಾರ್, ಗಜೇಂದ್ರ, ಶೋಭಾ ಗಣೇಶ್, ಮಂಜುನಾಥ್, ಶ್ರೀಧರ್, ಲೋಕೇಶ್ ದಯಾನಂದ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net