ಸೂಕ್ತಕ್ರಮದ ಭರವಸೆ ಮೇರೆಗೆ ಧರಣಿ ಅಂತ್ಯ

Protest ends after promise of appropriate action
ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿ ಎದುರು ಧರಣಿ ನಡೆಸುತ್ತಿದ್ದ ದಲಿತ, ಪ್ರಗತಿಪರ, ರೈತಪರ ಸಂಘಟನೆಗಳ ಮುಖಂಡರಿಗೆ ಪಿಡಿಒ ಪಿ.ಎಸ್. ನಾಯ್ಕೋಡಿ, ಗ್ರಾಪಂ ಅಧ್ಯಕ್ಷ ಜಗದೀಶ ಲಮಾಣಿ ಲಿಖಿತ ಭರವಸೆ ಪತ್ರ ನೀಡಿ ಧರಣಿ ಮುಕ್ತಾಯಗೊಳಿಸಿದರು. ಬಸವರಾಜ ಸಿದ್ದಾಪುರ, ರಾಮಣ್ಣ ಕವಡಿಮಟ್ಟಿ ಇತರರಿದ್ದರು.
Published on

ಮುದ್ದೇಬಿಹಾಳ: ಕುಂಟೋಜಿ ಗ್ರಾಮ ಪಂಚಾಯಿತಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕಾನೂನುಬಾಹಿರವಾಗಿ ನೇಮಕ ಮಾಡಿಕೊಂಡಿರುವ ಮೂವರು ವಾಟರ್‌ಮನ್‌ಗಳನ್ನು ವಜಾಗೊಳಿಸುವಂತೆ ಆಗ್ರಹಿಸಿ ದಲಿತ, ಪ್ರಗತಿಪರ, ರೈತಪರ ಸಂಘಟನೆಗಳ ಮುಖಂಡರು, ಸದಸ್ಯರು ಗ್ರಾ.ಪಂ. ಕಚೇರಿ ಎದುರು ಸೋಮವಾರದಿಂದ ನಡೆಸುತ್ತಿದ್ದ ಧರಣಿ ಸತ್ಯಾಗ್ರಹವು ಗ್ರಾಪಂ ಅಧ್ಯಕ್ಷ ಜಗದೀಶ ಲಮಾಣಿ, ಪಿಡಿಒ ಪಿ.ಎಸ್.ನಾಯ್ಕೋಡಿ ಅವರು ಲಿಖಿತ ಭರವಸೆ ನೀಡಿದ್ದರಿಂದ ಗುರುವಾರ ಧರಣಿ ಅಂತ್ಯಗೊಂಡಿತು.

ವಜಾಗೊಳಿಸುವ ಅಧಿಕಾರ ಪಿಡಿಒಗೆ ಇರುವುದಿಲ್ಲ. ಪಂಚಾಯಿತಿ ರಾಜ್ ಕಾಯ್ದೆ 1993 ಪ್ರಕರಣ 113ರ ಪ್ರಕಾರ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಗೆ ಮಾತ್ರ ಇರುತ್ತದೆ. ಬೇಡಿಕೆ ಕುರಿತು ಅಧ್ಯಕ್ಷರೊಂದಿಗೆ ಚರ್ಚಿಸಿ ಮಾ.21ರಂದು ಸಾಮಾನ್ಯ ಸಭೆ ಕರೆಯಲಾಗಿದೆ. ಆ ಸಭೆಯಲ್ಲಿ ವಜಾ ಬೇಡಿಕೆ ಮಂಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಮುಖಂಡರಾದ ಬಸವರಾಜ ಪೂಜಾರ ಸಿದ್ದಾಪುರ, ಅರ್ಜಿದಾರ ರಾಮಣ್ಣ ಕವಡಿಮಟ್ಟಿ, ಸಂಘಟನೆಗಳ ಸದಸ್ಯರು, ಗ್ರಾಪಂ ಸಿಬ್ಬಂದಿ ಇದ್ದರು.

ಧರಣಿ ಕೈಬಿಟ್ಟ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಪೂಜಾರಿ, ರಾಮಣ್ಣ ಕವಡಿಮಟ್ಟಿ ಅವರು ನಕಲಿ ದಾಖಲೆ ಸೃಷ್ಟಿಸಿ ಮೂವರು ವಾಟರ್‌ಮನ್‌ಗಳನ್ನು ಪಂಚಾಯಿತಿಯಲ್ಲಿ ನೇಮಕ ಮಾಡಿಕೊಳ್ಳಲಾಗಿತ್ತು. ಇದನ್ನು ಪ್ರಶ್ನಿಸಿ ದಾಖಲೆ ಸಮೇತ ಜಿಲ್ಲಾ ಪಂಚಾಯಿತಿ ಸಿಇಒಗೆ ದೂರು ನೀಡಲಾಗಿದೆ. ದಾಖಲೆ ಪರಿಶೀಲಿಸಿದ ಸಿಇಒ ಅವರು ವಾಟರ್‌ಮನ್‌ಗಳನ್ನು ವಜಾಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಇಒ ಅವರಿಗೆ ಆದೇಶ ಮಾಡಿದ್ದರು. ತಾಪಂ ಇಒ ಅವರು ಪಂಚಾಯಿತಿ ಪಿಡಿಒಗೆ ಪತ್ರ ಬರೆದು ಕ್ರಮಕ್ಕೆ ಸೂಚಿಸಿದ್ದರೂ ಪಾಲಿಸಿರಲಿಲ್ಲ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಸಾಮಾನ್ಯ ಸಭೆಯಲ್ಲಿ ನ್ಯಾಯದ ಪರ ನಿರ್ಣಯ ಆಗದೇ ಹೋದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net