ರಸ್ತೆ ಬಂದ್ ಮಾಡಿ ಪ್ರತಿಭಟನೆ

3BNK01
Published on

ಬಂಕಾಪುರ: ಜಿಲ್ಲೆಯಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ಗಳಲ್ಲಿ ಪೂರ್ಣ ಪ್ರಮಾಣದ ತರಗತಿಗಳನ್ನು ನಡೆಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾ ಎಬಿವಿಪಿ ಸಂಘಟನೆ ಹಾಗೂ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ವಿದ್ಯಾರ್ಥಿಗಳು ಪಟ್ಟಣದ ಮುಂಡಗೋಡ ಸರ್ಕಲ್​ನಲ್ಲಿ ರಸ್ತೆ ಬಂದ್ ಮಾಡಿ ಸೋಮವಾರ ಪ್ರತಿಭಟನೆ ನಡೆಸಿದರು.

ಕೋವಿಡ್ ಸೋಂಕಿನಿಂದಾಗಿ ಕಳೆದೆರಡು ವರ್ಷಗಳಿಂದ ಕಾಲೇಜ್​ಗಳು ಆರಂಭಗೊಳ್ಳದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಹಿನ್ನಡೆ ಅನುಭವಿಸಿದ್ದಾರೆ. ಕಾಲೇಜ್ ಆರಂಭಗೊಂಡ ಕೆಲ ದಿನಗಳಲ್ಲಿಯೇ ಅತಿಥಿ ಉಪನ್ಯಾಸಕರು ಮುಷ್ಕರ ನಡೆಸುತ್ತಿದ್ದು, ಕಳೆದ 24 ದಿನಗಳಿಂದ ತರಗತಿಗಳು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಈ ತಿಂಗಳ ಕೊನೆಯಲ್ಲಿ ಆಂತರಿಕ ಪರೀಕ್ಷೆಗಳು ಇರುವುದರಿಂದ ಆದಷ್ಟು ಬೇಗ ಸರ್ಕಾರ ಈ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು. ಪೂರ್ಣ ಪ್ರಮಾಣದ ತರಗತಿಗಳು ನಡೆಯುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಸ್ಥಳಕ್ಕೆ ಆಗಮಿಸಿದ ಸವಣೂರ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ಮನವಿ ಸ್ವೀಕರಿಸಿ, ಈ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಲಾಗುವುದು ಎಂದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಎಬಿವಿಪಿ ಜಿಲ್ಲಾ ಸಂಚಾಲಕ ಗಂಗಾಧರ ಕುಲಕರ್ಣಿ, ವಿಠ್ಠಲ ನವಲೆ, ಹನಮಂತಗೌಡ ಪಾಟೀಲ, ಲಿಂಗರಾಜ ಹಾದಿಮನಿ, ಹರ್ಷ ಮಾಮ್ಲೇಪಟ್ಟಣಶೆಟ್ಟರ, ವೀರೇಶ ಗಾಣಿಗೇರ, ಹೊನ್ನಪ್ಪ ಓಲೇಕಾರ, ಹರ್ಷ ಶೆಟ್ಟರ್, ವಾಗೀಶ ರಾಯಣ್ಣವರ, ಯಶವಂತ ಮಂಗಳಾರತಿ, ಮಾಲತೇಶ ಕರಡಿ, ಶಂಕರ ವಳಗೇರಿ, ಶಿವಪ್ಪ ಆಲದಕಟ್ಟಿ, ಹರೀಶ ಗಾಳೆಮ್ಮನವರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net