

ಬೆಂಗಳೂರು: ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಬೆಂಗಳೂರಿನಾದ್ಯಂತ ಮಂಗಳವಾರ (ಸೆ.26) ಪ್ರತಿಭಟನೆ ನಡೆಸಲು ಕನ್ನಡ ಪರ ಸಂಘಟನೆಗಳು ಮುಂದಾಗಿದ್ದು, ಈ ಕುರಿತು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡರು ಪ್ರತಿಕ್ರಿಯಿಸಿದ್ದಾರೆ.
"ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ನಾಳೆ (ಸೆ.26) ಬೆಂಗಳೂರು ಬಂದ್ಗೆ ಕರೆ ಕೊಟ್ಟಿದ್ದಾರೆ. ಪ್ರತಿಭಟನೆ ಶಾಂತಿಯಿಂದ ನಡೆಯಬೇಕು. ಪ್ರತಿಭಟನೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಮನಸ್ಸಿನಲ್ಲಿರುವ ನೋವನ್ನು ವ್ಯಕಪಡಿಸಲು ಇದನ್ನು ಮಾಡುತ್ತಿದ್ದಾರೆ ಅಷ್ಟೇ" ಎಂದು ಹೇಳಿದರು.
"ತಮಿಳುನಾಡು ಅಣ್ಣ-ತಮ್ಮಂದಿರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಎಚ್.ಡಿ. ಕುಮಾರಸ್ವಾಮಿ ಡ್ಯಾಂಗೆ ತೆರಳಿ ಮಾಹಿತಿ ನೀಡಿದ್ದಾರೆ. ಈ ಕುರಿತು ನಾನು ಕೂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರದಿದ್ದೇನೆ. ಪ್ರಧಾನಿಗಳು ಖಂಡಿತವಾಗಿ ಇದಕ್ಕ ಪ್ರತಿಕ್ರಿಯೆ ನೀಡುತ್ತಾರೆ ಎಂಬ ನಂಬಿಕೆಯಿದೆ, ಅದನ್ನು ಈಗಲೂ ನಂಬುತ್ತೇನೆ, ನಾಳೆಯೂ ನಂಬುತ್ತೇನೆ" ಎಂದು ಹೇಳಿದ್ದಾರೆ.