

ಶಿವಮೊಗ್ಗ: ನಗರ ಪಾಲಿಕೆಯಲ್ಲಿ ಇ-ಸ್ವತ್ತು ಮಾಡಿಸಲು ತುಂಬ ಸಮಸ್ಯೆಯಾಗುತ್ತಿದೆ. ಪದೇಪದೆ ತಾಂತ್ರಿಕ ದೋಷ ಎದುರಾಗುತ್ತಿದೆ. ಕೂಡಲೇ ಇದನ್ನು ಸರಿಪಡಿಸಬೇಕೆಂದು ಆಗ್ರಹಿಸಿ ಮಲೆನಾಡು ಕೇಸರಿ ಪಡೆ ಪ್ರಮುಖರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಖಾಸಗಿ ಸ್ವತ್ತುಗಳ ಅಕ್ರಮ ಪರಭಾರೆ, ಖಾತೆಯಾಗುವುದನ್ನು ತಡೆಗಟ್ಟಲು ಇ-ಸ್ವತ್ತನ್ನು 2018ರಿಂದಲೇ ಜಾರಿಗೆ ತಂದಿದೆ. ಇದಕ್ಕಾಗಿ ಶಿವಮೊಗ್ಗ ನಗರ ಪಾಲಿಕೆ ಕೂಡ 15ಕ್ಕೂ ಹೆಚ್ಚು ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಂಡಿತ್ತು. ಆದರೂ ಪಾಲಿಕೆಯಿಂದ ಇ-ಸ್ವತ್ತು ಪಡೆಯಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಾಖಲೆಗಳ ಮಾಹಿತಿ ಅಪ್‌ಲೋಡ್ ಮಾಡಲು ತಾಂತ್ರಿಕ ದೋಷ ಎದುರಾಗುತ್ತಿದೆ. ಸರ್ವರ್ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಸಿಬ್ಬಂದಿ ಸಬೂಬು ಹೇಳುತ್ತಿದ್ದಾರೆ. ಇ-ಸ್ವತ್ತು ಇಲ್ಲದೆ ದಾಖಲೆಗಳೂ ಊರ್ಜಿತವಾಗುತ್ತಿಲ್ಲ. ಆಸ್ತಿಗಳ ಮಾರಾಟ, ಖರೀದಿಗೆ ತೊಂದರೆಯಾಗುತ್ತಿದೆ. ಹಣದ ಅವಶ್ಯಕತೆ ಇರುವವರು ಯಾರಿಗೂ ಆಸ್ತಿ ಮಾರಾಟ ಮಾಡಲು ಆಗುತ್ತಿಲ್ಲ. ಇ-ಸ್ವತ್ತು ಮಾಡಿಕೊಡಲು ಕೆಲ ಸಿಬ್ಬಂದಿ ಹಣದ ಬೇಡಿಕೆ ಇರಿಸಿರುವ ಆರೋಪಗಳೂ ಇವೆ ಎಂದು ದೂರಿದರು.
ಮಲೆನಾಡು ಕೇಸರಿ ಪಡೆ ಅಧ್ಯಕ್ಷ ಎಸ್.ಜೆ.ರಾಜು, ಪ್ರಮುಖರಾದ ರಾಕೇಶ್‌ಕುಮಾರ್, ಮಂಜುನಾಥ್, ಶ್ರೀನಿವಾಸ್, ಚಂದನ್, ಯಶವಂತ್ ಪ್ರತಿಭಟನೆಯಲ್ಲಿದ್ದರು.