

ಶಿರಸಿ: ನಗರದ ಐದು ರಸ್ತೆ ವರ್ತುಲಕ್ಕೆ ಡಾ. ಅಂಬೇಡ್ಕರ್ ವೃತ್ತ ಎಂದು ನಾಮಕರಣ ಮಾಡುವುದರ ಜತೆಗೆ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಬೇಕೆಂದು ಆಗ್ರಹಿಸಿ ಭೀಮ ಘರ್ಜನೆ ಸಂಘಟನೆಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಸಂಘಟನೆಯ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ, ವಾಹನ ಸಂಚಾರ ತಡೆದು, ಟಯರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಅರ್ಜುನ ಮಿಂಟಿ ಮಾತನಾಡಿ, ಡಾ. ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಬೇಕೆಂದು ಕಳೆದ 3 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಶಾಸಕ ಭೀಮಣ್ಣ ನಾಯ್ಕ, ಸಂಸದರು, ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಯಾರಿಂದಲೂ ಸಕಾರಾತ್ಮಕ ಉತ್ತರ ಬಂದಿಲ್ಲ. ಈ ಬಗ್ಗೆ ನಗರಸಭೆ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತು ಶೀಘ್ರವೇ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ತಿಲಕ್ ಹುಬ್ಬಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜಯ ಮಡಗಾವಂಕರ್, ತಾಲೂಕಾಧ್ಯಕ್ಷ ಪುನೀತ್ ಮರಟೆ, ಉಪಾಧ್ಯಕ್ಷ ಶ್ಯಾಮ್ ದೇಶಭಾಗ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಮಿತ್ ಜೋಗಳೇಕರ್, ತಾಲೂಕು ಪ್ರಧಾನ ಕಾರ್ಯದರ್ಶಿ ಅಕ್ಷಯ ಧೋತ್ರೆ, ಕಾರ್ಯಕರ್ತರಾದ ಅಜಿತ ಮಿಂಟಿ, ನವೀನ ಕಾನಡೆ, ಗೌತಮ ನೇತ್ರೇಕರ, ವಿಶ್ವ ಪಾವಸ್ಕರ್ ಇತರರು ಇದ್ದರು.