

ಹುಣಸೂರು: ನಗರದ ಬೈಪಾಸ್ ರಸ್ತೆಯಲ್ಲಿ 6 ವರ್ಷಗಳೇ ಸಂದರೂ ಇನ್ನೂ ನಿರ್ಮಾಣ ಹಂತದಲ್ಲೇ ಉಳಿದಿರುವ ಹೈಟೆಕ್ ಸಾರ್ವಜನಿಕ ಆಸ್ಪತ್ರೆಯನ್ನು ಶೀಘ್ರ ಜನರ ಅನುಕೂಲಕ್ಕಾಗಿ ಸಮರ್ಪಿಸಬೇಕೆಂದು ಆಗ್ರಹಿಸಿ ಸತ್ಯ ಎಂಎಎಸ್ ಫೌಂಡೇಷನ್ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನೆಡಸಲಾಯಿತು.
ನಿರ್ಮಾಣ ಹಂತದಲ್ಲಿರುವ ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಫೌಂಡೇಷನ್ ಸದಸ್ಯರು ರಾಜ್ಯ ಸರ್ಕಾರ ಮತ್ತು ತಾಲೂಕು ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ ಅಕ್ರೋಶ ವ್ಯಕ್ತಪಡಿಸಿದರು.
ಫೌಂಡೇಷನ್ ಅಧ್ಯಕ್ಷ ಸತ್ಯಪ್ಪ ಮಾತನಾಡಿ, ಹುಣಸೂರು ವಿಧಾನಸಭಾ ಕ್ಷೇತ್ರಕ್ಕೆ ಘಟಾನುಘಟಿ ನಾಯಕರು ಶಾಕರಾಗಿದ್ದಾರೆ. ಆದರೆ 37 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ 100 ಹಾಸಿಗೆಗಳ ಸಾಮರ್ಥ್ಯದ ಸಾರ್ವಜನಿಕ ಹೈಟೆಕ್ ಆಸ್ಪತ್ರೆ ಕಾಮಗಾರಿ ಇಂದಿಗೂ ಪೂರ್ಣಗೊಂಡಿಲ್ಲ. ಹಾಲಿ ಇರುವ ಆಸ್ಪತ್ರೆ ಅತ್ಯಂತ ದುಸ್ಥಿತಿ ತಲುಪಿದ್ದು, ರೋಗಿಗಳು ಜೀವಭಯದಲ್ಲೇ ಚಿಕಿತ್ಸೆ ಪಡೆಯುವಂತಾಗಿದೆ. ತಾಲೂಕಿನ ಹನಗೋಡು ಹೋಬಳಿ ಕೇಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಒಂದೂವರೆ ವರ್ಷಗಳಿಂದ ತುರ್ತುವಾಹನ ಸೇವೆ ಸಿಗದೇ ಗಿರಿಜನರು ಮತ್ತು ಸಾರ್ವಜನಿಕರು ಪರದಾಡುವಂತಾಗಿದೆ ಎಂದು ಬೇಸರಿಸಿದರು.
ಸರ್ಕಾರ ಮತ್ತು ತಾಲೂಕು ಆಡಳಿತ ಕೂಡಲೇ ಆಸ್ಪತ್ರೆಯ ಕಾಮಗಾರಿ ಸಂಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಒದಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಎಂ.ಶಂಭುಗೌಡ, ಎಂ.ಕೃಷ್ಣೇಗೌಡ, ಬಸಪ್ಪ ಹಂದನಹಳ್ಳಿ, ಪುರುಷೋತ್ತಮರಾವ್ ಸಾಳುಂಕೆ, ತಾಲೂಕು ಮಡಿವಾಳ ಸಂಘದ ಪ್ರಧಾನ ಕಾರ್ಯದರ್ಶಿ ನಾಗಪ್ಪಶೆಟ್ಟಿ, ಗೋಂದಳಿ ಸಮಾಜದ ಅಧ್ಯಕ್ಷ ಆನಂದ, ರಾಕೇಶ್‌ರಾವ್, ಗ್ರಾಮ ಪಂಚಾಯಿತಿ ಸದಸ್ಯರಾದ ಕುಮಾರ್, ಶಿವಶೇಖರ, ಚಂದ್ರೇಗೌಡ, ಸ್ಟಾಲಿನ್, ದೇವರಾಜೇಗೌಡ, ಹೇಮಚಂದ್ರೇಗೌಡ, ಸೋಮಶೇಖರ, ಚಿಕ್ಕನಂಜಯ್ಯ, ಪ್ರಕಾಶ್, ವಿಜಯಲಕ್ಷ್ಮೀ, ಪವಿತ್ರಾ, ಶೋಭಾ, ಸವಿತಾ, ಲಕ್ಷ್ಮಮ್ಮ, ರುದ್ರಮ್ಮ ಮುಂತಾದವರು ಹಾಜರಿದ್ದರು.
ಪ್ರತಿಭಟನಾ ಸ್ಥಳಕ್ಕೆ ಉಪವಿಭಾಗಾಧಿಕಾರಿ ಎಚ್.ಬಿ.ವಿಜಯಕುಮಾರ್ ಧಾವಿಸಿ ಮನವಿ ಸ್ವೀಕರಿಸಿ ಮಾತನಾಡಿ, ಫೌಂಡೇಷನ್ ವತಿಯಿಂದ ನೀಡಿರುವ ಎಲ್ಲ ಬೇಡಿಕೆಗಳ ಕುರಿತು ಸರ್ಕಾರದ ಗಮನಕ್ಕೆ ತಂದು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.