

ಶಿವಮೊಗ್ಗ: ಕಾಂತರಾಜ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಶೀಘ್ರ ಜಾರಿಗೆ ತರಬೇಕೆಂದು ಆಗ್ರಹಿಸಿ ಅಹಿಂದ ಚಳವಳಿ ಸಂಘಟನೆ, ಹಿಂದುಳಿದ ಜನಜಾಗೃತಿ ವೇದಿಕೆಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಸಂವಿಧಾನದ ಪರಿಚ್ಛೇದ 15(4), 16(4) ಹಾಗೂ ಪರಿಚ್ಛೇದ 340ರಡಿ ನೇಮಕವಾದ ಕಾಂತರಾಜ ಆಯೋಗ ವರದಿ ಜಾರಿಗೊಳಿಸಬೇಕು. ಬೆಳಗಾವಿಯಲ್ಲಿ ಪಂಚಮಸಾಲಿ ಸಮುದಾಯದ ಕೆಲವರು ವಿಧಾನಸಭೆ ಅಧಿವೇಶನಕ್ಕೆ ಮುತ್ತಿಗೆ ಹಾಕಿ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿರುವುದು ಖಂಡನೀಯ. 2ಎ ಮೀಸಲಾತಿ ಹರಿದು ತಿನ್ನುವ ಯಾವುದೇ ಪ್ರಯತ್ನವನ್ನು ಈ ಶ್ರೇಣಿಯಲ್ಲಿರುವ ಹಿಂದುಳಿದ ವರ್ಗಗಳು ವಿರೋಧಿಸುತ್ತವೆ ಎಂದರು.
ಸಂವಿಧಾನ ವಿರೋಧಿಯಾದ ಬೇಡಿಕೆ ಹಿಂದುಳಿದ ವರ್ಗಗಳಲ್ಲಿ ಆಕ್ರೋಶ ಉಂಟುಮಾಡಿದ್ದು, ಸಮಾಜದಲ್ಲಿ ಅಶಾಂತಿ ತಲೆದೋರಲು ಕಾರಣವಾಗಿದೆ. ಆದ್ದರಿಂದ 2ಎ ಮೀಸಲಾತಿ ಸೇರ್ಪಡೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಹಿಂದ ಚಳವಳಿ ಸಂಘಟನೆ ಪ್ರಧಾನ ಕಾರ್ಯದರ್ಶಿ ಸುರೇಂದ್ರ, ಪ್ರಮುಖರಾದ ಮೊಹಮ್ಮದ್ ಸನಾವುಲ್ಲಾ, ಪ್ರೊ. ಎಚ್.ರಾಚಪ್ಪ, ಆರ್.ಪ್ರಸನ್ನಕುಮಾರ್, ಎನ್.ಪಿ.ಧರ್ಮರಾಜ್, ಮಂಜುನಾಥ ಬಾಬು, ಪ್ರೊ. ಕಲ್ಲನ, ಪ್ರೊ. ಜಿ.ಪರಮೇಶ್ವರಪ್ಪ, ಬಿ.ಜನಮೇಜಿರಾವ್, ಆರ್.ಟಿ.ನಟರಾಜ್, ವಿ.ರಾಜು, ಎಸ್.ವಿ.ರಾಜಮ್ಮ, ಚನ್ನವೀರಪ್ಪ ಗಾಮನಗಟ್ಟಿ, ನಗರದ ಮಹಾದೇವಪ್ಪ, ಅತ್ತಿಗುಂದ ಚಂದ್ರಶೇಖರ್, ಎಸ್.ಬಿ.ಅಶೋಕ್‌ಕುಮಾರ್, ಸುರೇಶ್ ಬಾಬು, ಅಫ್ರಿದಿ ಮತ್ತಿತರರಿದ್ದರು.