ಸ್ಥಳೀಯರಿಗೆ ಉದ್ಯೋಗ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ ಸೆ. 25ರಂದು

IMG-20230922-WA0023
Published on

ರಾಣೆಬೆನ್ನೂರ: ತಾಲೂಕಿನ ಹನುಮನಹಳ್ಳಿ ಹಾಗೂ ತೆರೆದಹಳ್ಳಿ ಹತ್ತಿರದಲ್ಲಿ ಆರಂಭವಾಗಿರುವ ಗೋಲ್ಡನ್ ಹ್ಯಾಜೀರಿಸ್ ಲಿಮಿಟೆಡ್ ಕಂಪನಿಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಒತ್ತಾಯಿಸಿ ಸೆ. 25ರಂದು ಬೆಳಗ್ಗೆ 11ಕ್ಕೆ ಹನುಮನಹಳ್ಳಿ ಬಳಿ ರಸ್ತೆ ಸಂಚಾರ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಕಂಪನಿಗಳು ಸ್ಥಳೀಯರ ಭೂಮಿ ಕಸಿದುಕೊಂಡು ಕಂಪನಿ ಆರಂಭ ಮಾಡುವ ಜತೆಗೆ ಸ್ಥಳೀಯ ನಿವಾಸಿಗಳನ್ನು ಅನಾರೋಗ್ಯ ಪೀಡತರನ್ನಾಗಿ ಮಾಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆಯಿಂದ ಸ್ಥಳೀಯ ರೈತರ ಮಕ್ಕಳಿಗೆ ಉದ್ಯೋಗ ಹಾಗೂ ಜೀವನಮಟ್ಟ ಸುಧಾರಣೆ ಎನ್ನುತ್ತಾ ಗ್ರಾಮಗಳತ್ತ ಮುಖಮಾಡುತ್ತಿರುವ ಕೈಗಾರಿಗೆಗಳು ರೈತರನ್ನು ವಂಚಿಸುತ್ತಿವೆ.
ಈ ಕಂಪನಿಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವ ಬದಲು ಇತರ ರಾಜ್ಯಗಳಿಂದ ಕಾರ್ಮಿಕರನ್ನು ಕರೆತಂದು ಕೆಲಸ ಮಾಡುವ ಪ್ರಯತ್ನ ನಡೆಯುತ್ತಿದೆ. ಕೂಡಲೇ ಇಂತಹ ರೈತ ವಿರೋಧಿ ಕಂಪನಿಗಳು ಇಂತಹ ಪ್ರಯತ್ನ ಕೈಬಿಟ್ಟು ಸ್ಥಳೀಯರಿಗೆ ಉದ್ಯೋಗ ನೀಡಬೇಕು. ಇದರಿಂದ ಸ್ಥಳೀಯ ನಿರುದ್ಯೋಗಿ ಯುವಕರಿಗೆ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಹನುಮನಹಳ್ಳಿ ಗ್ರಾಮದಿಂದ ಪ್ರತಿಭಟನೆ ಆರಂಭಿಸಿ ಸಂಚಾರ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ರೈತ ಮುಖಂಡ ಈರಣ್ಣ ಹಲಗೇರಿ, ಬಸವರಾಜ ಕೊಂಗಿ, ಶೈಲಾ ಕೊಟ್ಟದ, ಕವಿತಾ ಕುಸನೂರ, ಶೈಲಜಾ ಕೊಟ್ಟದ, ರೇಣುಕಾ ಲಮಾಣಿ, ಲೀಲಾವತಿ ಕರ್ಜಗಿ, ಗೌರಮ್ಮ ಸರವಂದ, ಪ್ರಶಾಂತರೆಡ್ಡಿ ಯರೆಕುಪ್ಪಿ, ಶೈಲಾ ಅಸುಂಡಿ, ಬಸವರಾಜ ಯಲ್ಲಕ್ಕನವರ, ಹರಿಹರಗೌಡ ಪಾಟೀಲ, ಕರಬಸಪ್ಪ ಮೇಗಳಮನಿ, ನಿತ್ಯಾನಂದ ಕುಂದಾಪುರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net