

ಎಚ್.ಡಿ.ಕೋಟೆ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದ ದೇಶದ್ರೋಹಿ ವಕೀಲ ರಾಕೇಶ್ ಕಿಶೋರ್ ಅವರನ್ನು ದೇಶದ್ರೋಹ ಕಾಯ್ದೆಯಡಿ ಬಂಧಿಸಿ ಗಡಿಪಾರು ಮಾಡುವಂತೆ ಒತ್ತಾಯಿಸಿ ಡಾ.ಬಿ.ಆರ್.ಅಂಬೇಡ್ಕರ್ ಪ್ರಗತಿಪರ ಒಕ್ಕೂಟದ ವತಿಯಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
ತಾಲೂಕಿನ ಅಂತರಸಂತೆ ಹೋಬಳಿ ಮಟ್ಟದ ಡಾ.ಬಿ.ಆರ್ ಅಂಬೇಡ್ಕರ್ ಪ್ರಗತಿಪರ ಒಕ್ಕೂಟ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಹಿರಿಯ ವಕೀಲ ರಾಕೇಶ್‌ಕಿಶೋರ್ ಅವರು ಶೂ ಎಸೆಯುವ ಪ್ರಯತ್ನ ಇಡೀ ದೇಶವೇ ತಲೆತಗ್ಗಿಸುವ ವಿಚಾರವಾಗಿದೆ.
ರಾಕೇಶ್‌ಕಿಶೋರ್ ಕಾನೂನು ಪದವಿ ಪಡೆದ ವ್ಯಕ್ತಿ ಎಂಬುದನ್ನು ಮರೆತು ಕಾನೂನು ಪರಿಪಾಲನೆ ಮಾಡುವ ದೇಶದ ಅತ್ಯುನ್ನತ ಸ್ಥಾನದಲ್ಲಿ ಇರುವ ಮುಖ್ಯ ನ್ಯಾಯಮೂರ್ತಿ ಅವರನ್ನು ಆವಮಾನಿಸಿರುವುದು ಈ ದೇಶದ ಸಂವಿಧಾನಕ್ಕೆ ಮಾಡಿದ ಅಪಮಾನ. ಹಾಗಾಗಿ ವಕೀಲ ಕಿಶೋರ್ ರಾಕೇಶ್‌ನನ್ನು ದೇಶ ದ್ರೋಹದ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿ ವಕೀಲನನ್ನು ಬಂಧಿಸಿ ಗಡಿಪಾರು ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಒಕ್ಕೂಟದ ಅಧ್ಯಕ್ಷ ಹೊಸಮಾಳ ಮಂಜು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಮೇಲೆ ನಡೆದ ಘಟನೆ ಪ್ರಜಾಪ್ರಭುತ್ವದ ಮೇಲೆ ನಡೆಸಿದ ದಾಳಿ ಎಂದೇ ಹೇಳಬಹುದು. ಮಧ್ಯಪ್ರದೇಶದ ವಿಷ್ಣುಮೂರ್ತಿ ವಿಚಾರಣೆಯಲ್ಲಿ ಹಿಂದು ಧರ್ಮ ಅರ್ಥಾತ್ ಸನಾತನ ಧರ್ಮದ ಮೇಲೆ ಗವಾಯಿ ಅವರು ಮಾಡಿದ ಅವಮಾನವೆಂದು ನೆಪ ಮಾಡಿಕೊಂಡು ಪಿತೂರಿ ಮಾಡಿಕೊಂಡು ಬಂದಿದ್ದರು. ಆರಂಭದಿಂದಲೂ ನಾನೊಬ್ಬ ಅಪ್ಪಟ ಅಂಬೇಡ್ಕರ್ ವಾದಿ ಎಂದು ಹೇಳಿಕೊಂಡು ಬಂದ ಮುಖ್ಯ ನ್ಯಾಯಮೂರ್ತಿಗಳು ಮೇಲೆ ಶೂ ಎಸೆದ ಅವಮಾನ ಇಡೀ ಮನುಕುಲಕ್ಕೆ ಆದ ಅವಮಾನವಾಗಿದೆ. ಅವರಿಗೆ ಕಠಿಣ ಶಿಕ್ಷೆಯನ್ನು ವಿಧಿಸುವ ಮೂಲಕ ದೇಶದಿಂದಲೇ ಗಡಿಪಾರು ಮಾಡುವಂತೆ ಒತ್ತಾಯಿಸಿದರು.
ಬಳಿಕ ತಹಸೀಲ್ದಾರ್ ಶ್ರೀನಿವಾಸ್ ಅವರ ಮೂಲಕ ರಾಷ್ಟ್ರಪತಿಗೆ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಗೂ ಮುನ್ನ ಮಾನಂದವಾಡಿ ರಸ್ತೆಯ ಪೆಟ್ರೋಲ್ ಬಂಕ್‌ನಿಂದ ನಾಡಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಸಿ ವಕೀಲ ರಾಕೇಶ್ ಕಿಶೋರ್ ಪ್ರತಿಕೃತಿ ದಹಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬುದ್ಧ, ಪುಟ್ಟರಾಜು ನೂಲುಕುಪ್ಪೆ, ಗೋವಿಂದರಾಜ ಅಂತರಸಂತೆ, ಎಂ.ರಾಜಣ್ಣ ಹೊಸಮಳ, ಚಿನ್ನಯ್ಯ ಮಾಗುಡಿಲು, ರೇಖಾ ಗುರುಸ್ವಾಮಿ, ರಾಮು, ಬಾಲಯ್ಯ, ಅಂತರಸಂತೆ, ರಾಜಣ್ಣ ಅಂಗಟ್ಟಿ, ದೇವಯ್ಯ ಅನಗಟ್ಟಿ, ರಾಮು, ನಾಗಯ್ಯ, ಕೆಂಪ, ಸ್ವಾಮಿ, ಶಿವು, ನಂಜುಂಡ, ಶಂಬಯ್ಯ, ಸುರೇಶ, ಎಳಕೂಸಯ್ಯ, ರಾಜಣ್ಣ ಇದ್ದರು.