ಒಳ ಮೀಸಲಾತಿ, ಜಾತಿಗಣತಿ ವರದಿ ಜಾರಿಗೆ ಹೋರಾಟ: ಮಾದಿಗ ಸಮುದಾಯದವರ ನಿರ್ಣಯ; ಸರ್ಕಾರದ ಮೇಲೆ ಇನ್ನಷ್ಟು ಒತ್ತಡ..

Caste
ರಾಜ್ಯ ಮಾದಿಗ ಸಮುದಾಯದ ಮುಖಂಡರ ಸಭೆಯನ್ನು ಸಚಿವ ಕೆ.ಎಚ್.ಮುನಿಯಪ್ಪ ಉದ್ಘಾಟಿಸಿದರು. ಎಚ್. ಆಂಜನೇಯ, ಬಿ.ಎನ್.ಚಂದ್ರಪ್ಪ ಇತರರಿದ್ದರು.
Published on

ಬೆಂಗಳೂರು: ಒಳ ಮೀಸಲಾತಿ ಕಲ್ಪಿಸಲು ರಚಿಸಲಾಗಿದ್ದ ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಹಾಗೂ ಜಾತಿಗಣತಿ ವರದಿಯನ್ನು ಸಚಿವ ಸಂಪುಟದಲ್ಲಿ ತಂದು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವ ಬಗ್ಗೆ ರಾಜ್ಯ ಮಾದಿಗ ಸಮುದಾಯದ ರಾಜಕೀಯ ನಾಯಕರು ಸೇರಿ ಮುಖಂಡರು ನಿರ್ಣಯ ತೆಗೆದುಕೊಂಡರು.

ಕರ್ನಾಟಕ ಆದಿಜಾಂಬವರ ಸಾಂಸ್ಕೃತಿ ಸಮಿತಿ ಸೋಮವಾರ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಾದಿಗ ಸಮುದಾಯದ ಮುಖಂಡರ ಸಭೆಯಲ್ಲಿ ವಿಧಾನಸಭೆ ಅಧಿವೇಶನದಲ್ಲಿ ಕಡ್ಡಾಯವಾಗಿ ಸದಾಶಿವ ಆಯೋಗದ ವರದಿ ಹಾಗೂ ಜಾತಿ ಗಣತಿ ವರದಿಯನ್ನು ಸ್ವೀಕರಿಸಿ ಮಂಡಿಸಬೇಕು. ಇದಕ್ಕಾಗಿ ನಾವೆಲ್ಲರೂ ಸೇರಿ ಬೀದಿಗಿಳಿದು ಹೋರಾಟ ನಡೆಸೋಣ ಎಂದು ಸಭೆಯಲ್ಲಿದ್ದವರು ಹೇಳಿದರು.

ಅಕಾಡೆಮಿ, ನಿಗಮ ಮಂಡಳಿಯಲ್ಲಿ ಅಧ್ಯಕ್ಷರ ಹುದ್ದೆ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕುಲಪತಿ, ಕುಲಸಚಿವರು, ಸಿಂಡಿಕೇಟ್ ಸದಸ್ಯರ ನೇಮಕಾತಿಯಲ್ಲಿ ಸಮುದಾಯದಕ್ಕೆ ಹೆಚ್ಚಿನ ಪ್ರಾತಿನಿಧ್ಯತೆ ನೀಡುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕು. ಸರ್ಕಾರದಲ್ಲಿ ನಮ್ಮ ಸಮುದಾಯದ ಇಬ್ಬರು ಸಚಿವರು ಇರುವುದರಿಂದ ಈ ಎಲ್ಲ ವಿಚಾರಗಳನ್ನು ಅನುಷ್ಠಾನಕ್ಕೆ ತರಲು ಸಿಎಂ ಅವರ ಗಮನಕ್ಕೆ ತರಬೇಕು. ಈ ವಿಚಾರದಲ್ಲಿ ತಡಮಾಡ ಬಾರದು ಎಂದು ಸಭೆಯಲ್ಲಿ ಮುಖಂಡರು ಸಲಹೆ ನೀಡಿದರು.

ಬೇರೆಯವರ ಆಟ ನಡೆಯಲ್ಲ: ‘ನ್ಯಾ.ಎ.ಜೆ.ಸದಾಶಿವ ಆಯೋಗ’ ವರದಿ ಹಾಗೂ ಕಾಂತರಾಜ್ ಅವರ ‘ಜಾತಿಗಣತಿ’ ವರದಿ ಅನುಷ್ಠಾನಕ್ಕೆ ತೀವ್ರ ಸ್ವರೂಪ ಹೋರಾಟ ನಡೆಸೋಣ. ನಮ್ಮ ಸರ್ಕಾರವಿದ್ದರೂ ಶಾಸಕರ ಮನೆಗಳಿಗೆ ಮುತ್ತಿಗೆ ಹಾಕಬೇಕು. ನಮ್ಮ ಸಮುದಾಯದ ಹೋರಾಟ ಒಗ್ಗಟ್ಟಿನಲ್ಲಿ ಸಾಗಬೇಕು. ಈ ಹೋರಾಟ ತೀವ್ರ ಸ್ವರೂಪ ಕಾಣಬೇಕು. ಆಗ ಮಾತ್ರ ನಿಮ್ಮವರ ಮನೆ ಬಾಗಿಲಿಗೆ ಬರುತ್ತಾರೆ. ನಾನು ಸಚಿವನಾಗಿ ಈ ಮಾತು ಹೇಳುತ್ತಿದ್ದೇನೆ. ಅನಿವಾರ್ಯವಾಗಿ ಹೀಗೆ ಹೇಳುವ ಸಂದರ್ಭ ಬಂದಿದೆ. ನಾನಿದ್ದ ಮೇಲೆ ಬೇರೆಯವರ ಆಟ ನಡೆಯುವುದಿಲ್ಲ. ಎಲ್ಲದಕ್ಕೂ ಸಿದ್ಧವಾಗಿದ್ದೇನೆ ಎಂದು ಸಚಿವ ಕೆ.ಎಚ್. ಮುನಿಯಪ್ಪ ಆಕ್ರೋಶಭರಿತವಾಗಿ ಹೇಳಿದರು. ಒಳ ಮೀಸಲಾತಿ ಬಗ್ಗೆ ನಿರಂತರವಾಗಿ ಹೋರಾಟ ನಡೆಯುತ್ತಿದೆ. ಹಿಂದಿನ ಬಿಜೆಪಿ ಸರ್ಕಾರ ಒಳ ಮೀಸಲಾತಿ ಹಂಚಿಕೆ ಮಾಡಿತ್ತು. ಆದರೆ, ವೈಜ್ಞಾನಿಕವಾಗಿ ಹಂಚಿಕೆ ಮಾಡಿಲ್ಲ. ಮೀಸಲಾತಿ ಪ್ರಮಾಣ ಶೇ.50 ಮೀರುವ ಹಾಗಿಲ್ಲ. ಈ ನಿಟ್ಟಿನಲ್ಲಿ ಮುಂದಿನ ದಾರಿ ಕಂಡುಕೊಳ್ಳಬೇಕು ಎಂದು ಮುನಿಯಪ್ಪ ತಿಳಿಸಿದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಸದಾಶಿವ ಆಯೋಗ ರಚಿಸಲಾಯಿತು. ಹಲವು ಬಾರಿ ಒಳ ಮೀಸಲಾತಿ ಬಗ್ಗೆ ಧ್ವನಿ ಎತ್ತಿದ್ದೇನೆ. ಈಗ ನಾವೆಲ್ಲ ಬೀದಿಗಿಳಿದು ಒಳ ಮೀಸಲಾತಿಗಾಗಿ ಹೋರಾಟ ಮಾಡಬೇಕು. ಜಾತಿ ಗಣತಿ ವರದಿಯನ್ನೂ ಜಾರಿಗೆ ತರಬೇಕು. ಈಗ ನಮ್ಮದೇ ಸರ್ಕಾರ ಇದೆ. ನಮ್ಮ ಸಮುದಾಯದ ಸಚಿವರಾದ ಕೆ.ಎಚ್. ಮುನಿಯಪ್ಪ, ಆರ್.ಬಿ.ತಿಮ್ಮಾಪೂರ ಅವರು ಸಿಎಂ ಜತೆ ಮಾತನಾಡಬೇಕು. ಸಚಿವ ಸಂಪುಟದಲ್ಲಿ ಈ ಎರಡು ವರದಿಯನ್ನು ಯಾವಾಗ ಒಪ್ಪಿಗೆ ಕೊಡುತ್ತೀರಾ ಎಂಬುದನ್ನು ನಮ್ಮ ಸಮುದಾಯಕ್ಕೆ ತಿಳಿಸುವ ಕೆಲಸವಾಗಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು. ಈಗ ಮಾತನಾಡುವ ಸಮಯ ಬಂದಿದೆ. ಕಾಂಗ್ರೆಸ್ ಉಚಿತವಾಗಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದಂತೆ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಲೇಬೇಕು. ಅಧಿಕಾರಕ್ಕೆ ಯಾರು ಕೂಡ ಅಂಟಿಕೊಳ್ಳಬೇಡಿ. ಸಮುದಾಯಕ್ಕಾಗಿ ಹೋರಾಟ ಮಾಡಬೇಕು ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ, ಶಾಸಕ ಕೆ.ಎಸ್. ಬಸವಂತಪ್ಪ, ಎಂಎಲ್ಸಿ ಡಾ.ತಿಮ್ಮಯ್ಯ, ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಧರ್ಮಸೇನ್, ಕೆಪಿಸಿಸಿ ಅಸಂಘಟಿತ ಕಾರ್ವಿುಕ ವಿಭಾಗದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಇತರರಿದ್ದರು.

ಸದಾಶಿವ ವರದಿಯನ್ವಯ ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ನೀಡಬೇಕು. ಇದನ್ನು ತಡೆ ಹಿಡಿಯುವುದು ಒಂದು ಜನಾಂಗವನ್ನು ಹತ್ಯೆ ಮಾಡಿದಂತಾಗುತ್ತದೆ. ಒಳಮೀಸಲಾತಿ ಬಗ್ಗೆ ನಮ್ಮ ಸಮುದಾಯದ ಮುಖಂಡರು ಹೊರತುಪಡಿಸಿ ಉಳಿದ ಪರಿಶಿಷ್ಟ ಸಮುದಾಯದವರು ಮೌನವಾಗಿದ್ದಾರೆ. ಇದು ನಮ್ಮ ಮುಂದೆ ಇರುವ ದೊಡ್ಡ ಇಕ್ಕಟ್ಟು. | ಎಲ್.ಹನುಮಂತಯ್ಯ, ರಾಜ್ಯಸಭಾ ಸದಸ್ಯ ರಾಜ್ಯದಲ್ಲಿ ನಮ್ಮ ಪಕ್ಷವೇ ಅಧಿಕಾರದಲ್ಲಿದೆ. ಒಳ ಮೀಸಲಾತಿ ಸಮುದಾಯಕ್ಕೆ ಇದು ಅಗತ್ಯವಿದೆ. ಆದರೂ,ಒಟ್ಟಿಗೆ ಇಚ್ಛಾಶಕ್ತಿ ಪ್ರದರ್ಶನ ಆಗುತ್ತಿಲ್ಲ. ಒಳ ಮೀಸಲಾತಿ ಬೇಕು ಎಂದು ನಮ್ಮವರೇ ಒತ್ತಡ ತರಬೇಕಿತ್ತು. ಆ ಕೆಲಸವನ್ನು ನಮ್ಮ ಸರ್ಕಾರದಲ್ಲೇ ಮಾಡಿಲ್ಲ. ಯಾರೂ, ಏಕೆ ಮಾಡಿಲ್ಲ ಅಂತಾ ಗೊತ್ತಿಲ್ಲ. | ರೂಪಾ ಶಶಿಧರ್, ಶಾಸಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net