

ಶಿವಮೊಗ್ಗ: ಧರ್ಮಸ್ಥಳದ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಷಡ್ಯಂತ್ರದ ಬಗ್ಗೆ ವಿಶೇಷ ತನಿಖೆ ನಡೆಸಿ, ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹಿಂದು ರಾಷ್ಟ್ರ ಸಮನ್ವಯ ಸಮಿತಿ ಪ್ರಮುಖರು ಗುರುವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೋಟ್ಯಂತರ ಹಿಂದುಗಳ ಪವಿತ್ರ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಇತ್ತೀಚೆಗೆ ನಡೆಯುತ್ತಿರುವ ಅಪಪ್ರಚಾರ ಹಾಗೂ ದುರುದ್ದೇಶಿತ ವರದಿಗಳ ಬಗ್ಗೆ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅನಾಮಿಕ ವ್ಯಕ್ತಿಯ ಹೇಳಿಕೆ ಆಧರಿಸಿ ಸರ್ಕಾರ ವಿಶೇಷ ತನಿಖಾ ದಳವನ್ನು ರಚಿಸಿ ಕಾರ್ಯಾಚರಣೆ ನಡೆಸಿದರೂ ಅನಾಮಿಕನ ಹೇಳಿಕೆಗೆ ಪೂರಕವಾದ ಅಂಶಗಳು ಕಂಡು ಬಂದಿಲ್ಲ. ಆದರೆ ತನಿಖೆಯ ಅಧಿಕೃತ ಫಲಿತಾಂಶ ಪ್ರಕಟವಾಗುವ ಮೊದಲು ಕೆಲವು ಯೂಟ್ಯೂಬರ್‌ಗಳು ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳು ಧರ್ಮಸ್ಥಳ ಕ್ಷೇತ್ರದ ಬಗ್ಗೆ ಸುಳ್ಳು ಮತ್ತು ದುರುದ್ದೇಶಿತ ವರದಿಗಳನ್ನು ಪ್ರಸಾರ ಮಾಡಿರುವುದರಿಂದ ಹಿಂದು ಸಮಾಜದ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ದೂರಿದರು.
ಈ ಎಲ್ಲ ಘಟನೆಗಳನ್ನು ಒಟ್ಟಿಗೆ ನೋಡಿದಾಗ ಇದು ತಕ್ಷಣದ ಘಟನೆಯಲ್ಲ. ಹಿಂದು ಧಾರ್ಮಿಕ ಕ್ಷೇತ್ರಗಳ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಪಿತೂರಿಯ ಭಾಗವೆಂಬುದು ಸ್ಪಷ್ಟವಾಗುತ್ತಿದೆ. ಧರ್ಮಸ್ಥಳಕ್ಕೆ ಅಪಮಾನ ಮಾಡಿದವರ ಬಗ್ಗೆ ವಿಶೇಷ ತನಿಖಾ ದಳದ ಮೂಲಕ ಸಂಪೂರ್ಣ ತನಿಖೆ ನಡೆಸಿ, ಸತ್ಯವನ್ನು ಸಮಾಜಕ್ಕೆ ತಿಳಿಸಬೇಕೆಂದು ಆಗ್ರಹಿಸಿದರು.
ಸುಳ್ಳು ಪ್ರಚಾರ ಹಾಗೂ ಧರ್ಮಸ್ಥಳ ಕ್ಷೇತ್ರದ ತೇಜೋವಧೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಹಿಂದು ಧಾರ್ಮಿಕ ಕೇಂದ್ರಗಳನ್ನು ಎಡಪಂಥೀಯ, ಕಮ್ಯೂನಿಸ್ಟರ ಒತ್ತಡಗಳಿಂದ ಮತ್ತು ಸುಳ್ಳು ಪ್ರಚಾರಗಳಿಂದ ರಕ್ಷಿಸಲು ಶಾಶ್ವತ ವ್ಯವಸ್ಥೆ ನಿರ್ಮಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಹಿಂದು ರಾಷ್ಟ್ರ ಸಮನ್ವಯ ಸಮಿತಿ ಪ್ರಮುಖರಾದ ದಿನೇಶ್ ಚೌಹಾಣ್, ಎಚ್.ಪ್ರಫುಲ್ಲಚಂದ್ರ, ಜಗ್ಗಣ್ಣ, ರಮೇಶ್‌ಬಾಬು ಜಾಧವ್, ವಿಶ್ವನಾಥ್, ಬಸವರಾಜ್ ಸಾಳಂಕೆ, ಕಾಂಚನಾ, ಜ್ಯೋತಿ, ಮಂಜುಳಾ, ವಕೀಲರಾದ ಉಜ್ವಲಾ, ವಾಗೀಶ್, ರಿತೇಶ್ ಪ್ರತಿಭಟನೆಯಲ್ಲಿದ್ದರು.