ವಂಚಕ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ

protest
ಗ್ರಾಹಕರನ್ನು ವಂಚಿಸಿದ ಕಂಪನಿಗಳ ವಿರುದ್ಧ ಕ್ರಮ ಕೈಗೊಂಡು ಹಣ ಹಿಂದಕ್ಕೆ ಮರಳಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ವಂಚನೆ ಸಂತ್ರಸ್ತ ಠೇವಣಿದಾರ ಕುಟುಂಬದ ಎಚ್.ಮಮತಾ, ಪ್ರಮುಖರಾದ ಸಂತೋಷ್, ಶಾಂತಮ್ಮ, ಹರೀಶ್, ಪ್ರತಿಮಾ, ಸುಬ್ರಾಯ ಶೇಟ್ ಮುಂತಾದವರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Published on

ಶಿವಮೊಗ್ಗ: ಜಿಲ್ಲೆಯ ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ವಂಚನೆಗೊಳಗಾದ ಠೇವಣಿದಾರರಿಗೆ ನ್ಯಾಯ ಒದಗಿಸಬೇಕು. ಮೋಸ ಮಾಡಿರುವ ಕಂಪನಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬದಿಂದ ಸೋಮವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಜಿಲ್ಲೆಯ ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಸಾರ್ವಜನಿಕರು ಕೋಟ್ಯಂತರ ರೂ. ಠೇವಣಿ ಮಾಡಿದ್ದರು. ಇದರಲ್ಲಿ ಅನೇಕ ಸಂಸ್ಥೆಗಳು ವಂಚನೆಗೈದು ಪರಾರಿಯಾಗಿವೆ. ಸಂಸ್ಥೆಯ ಯಾವ ಅಧಿಕಾರಿಯೂ ಠೇವಣಿದಾರರ ಸಂಪರ್ಕಕ್ಕೆ ಸಿಗುತ್ತಿಲ್ಲ. ಹಣ ಹೂಡಿಕೆ ಮಾಡಿದವರ ಬದುಕು ಬೀದಿಗೆ ಬಿದ್ದಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಅಗ್ರಿಗೋಲ್ಡ್ ಇ-ಸ್ಟೋರ್, ಸಮೃದ್ಧ ಜೀವನ, ಸಾಯಿ ಪ್ರಸಾದ್, ಗರೀಮಾ ಹಿಂದೂಸ್ತಾನ, ಪಿಎಸಿಎಲ್ ಮುಂತಾದ ಕಂಪನಿಗಳು ಈಗಾಗಲೇ ಜಿಲ್ಲೆಯಿಂದ ಕಾಲ್ಕಿತ್ತಿವೆ. ಗ್ರಾಹಕರ ಹಣಕ್ಕೆ ಪಂಗನಾಮ ಹಾಕಿವೆ. ರಾಜ್ಯದಲ್ಲಿ ಸುಮಾರು 250 ಇಂತಹ ಕಂಪನಿಗಳು ಠೇವಣಿದಾರರನ್ನು ವಂಚಿಸಿವೆ. ಸರ್ಕಾರ ಕೂಡಲೇ ಕಂಪನಿಗಳ ವಿರುದ್ಧ ಕ್ರಮ ಕೈಗೊಂಡು ಠೇವಣಿದಾರರಿಗೆ ಹಣ ಮರಳಿಸುವಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದರು.
ವಂಚನೆ ಸಂತ್ರಸ್ತ ಠೇವಣಿದಾರ ಕುಟುಂಬದ ಅಧ್ಯಕ್ಷೆ ಎಚ್.ಮಮತಾ, ಪ್ರಮುಖರಾದ ಶಾಂತಮ್ಮ, ಪ್ರತಿಮಾ, ಸಂತೋಷ್, ಹರೀಶ್, ಸುಬ್ರಾಯ್ ಶೇಟ್, ಲಿಂಗಪ್ಪ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net