ದೇವಾಲಯಗಳ ಭೂಮಿ ಭೂಗಳ್ಳರ ಪಾಲು, ಉನ್ನತಮಟ್ಟದ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

Karnataka State geleyara balaga
ದೇವಸ್ಥಾನಗಳ ಜಾಗ ಭೂಕಳ್ಳರ ಪಾಲಾಗುತ್ತಿದ್ದು ಉನ್ನತಮಟ್ಟದ ತನಿಖೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗೆಳೆಯರ ಬಳಗದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಎಂ.ಆರ್.ಅನಿಲ್‌ಕುಂಚಿ, ಡಿ.ಪರಮೇಶ್ವರಪ್ಪ, ಜಯಂತಿ, ವಿಜಯ್‌ಕುಮಾರ್, ರೂಪಾ, ಯುವರಾಜ್, ಬಿ.ಎಸ್.ರುದ್ರೋಜಿರಾವ್, ಪ್ರದೀಪ್, ರವಿ, ಆದರ್ಶ, ಆಯುಷಾ, ಹಸ್ಸಂ, ಶಾದಿಕ್ ಅಹಮ್ಮದ್, ಇಮ್ತಿಯಾಜ್, ರಾಜ್‌ಕುಮಾರ್, ಅಸ್ಕರ್ ಪಾಷಾ ಇದ್ದರು.
Published on

ಶಿವಮೊಗ್ಗ: ಶಿಕಾರಿಪುರ ತಾಲೂಕು ಕಚೇರಿಯ ಮುಜರಾಯಿ ಇಲಾಖೆ ದೇವಸ್ಥಾನಗಳಿಗೆ ಸೇರಿದ ಕೋಟ್ಯಂತರ ರೂ.ಮೌಲ್ಯದ ಭೂಮಿ ಭೂಗಳ್ಳರ ಪಾಲಾಗಿದ್ದು, ಕೂಡಲೇ ಉನ್ನತಮಟ್ಟದ ತನಿಖೆ ನಡೆಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಗೆಳೆಯರ ಬಳಗದ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ತಾಲೂಕಿನಲ್ಲಿ 39 ಮುಜರಾಯಿ ಇಲಾಖೆ ದೇವಸ್ಥಾನಗಳಿದ್ದು ಅದರಲ್ಲಿ ಪ್ರವರ್ಗ-ಎ ರಲ್ಲಿ 38, ಪ್ರವರ್ಗ-ಸಿ ಗೆ ಸೇರಿದ ದೇವಸ್ಥಾನಗಳ ಪೈಕಿ 14 ದೇವಸ್ಥಾನಗಳು 102 ಎಕರೆಗೂ ಅಧಿಕ ಭೂಮಿ ಹೊಂದಿದ್ದವು. ಅನೇಕ ವರ್ಷಗಳಿಂದ ಭೂಗಳ್ಳರು ಈ ದೇವಸ್ಥಾನಕ್ಕೆ ಸೇರಿದ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆಂದು ಪ್ರತಿಭಟನಕಾರರು ದೂರಿದರು.

ಶಿಕಾರಿಪುರದ ಹುಚ್ಚರಾಯ ಸ್ವಾಮಿ ದೇವಸ್ಥಾನಕ್ಕೆ ಸೇರಿದ 20 ಎಕರೆಗೂ ಅಧಿಕ ಭೂಮಿ ಹಾಗೂ ಖಾಲಿ ನಿವೇಶನ ಹಾಗೂ ಮನೆಗಳು ಇಂದು ಒತ್ತುವರಿದಾರರ ಪಾಲಾಗಿವೆ. ತಾಲೂಕು ಆಡಳಿತ ಇದನ್ನು ನೋಡಿದರೂ ಕಣ್ಣು ಮುಚ್ಚಿಕೊಂಡಿದೆ. ತಹಸೀಲ್ದಾರರು ಇದಕ್ಕೆ ಸ್ಪಷ್ಟನೆ ಕೊಡಬೇಕು. ಸರ್ಕಾರ ಕೂಡಲೇ ತಹಸೀಲ್ದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸರ್ಕಾರಿ ಭೂಮಿ ಸಂರಕ್ಷಿಸುವುದು ಸರ್ಕಾರದ ಕೆಲಸ. ಮುಜರಾಯಿ ಇಲಾಖೆಗೆ ಸೇರಿದ ಈ ಸರ್ಕಾರಿ ಭೂಮಿಗಳನ್ನು ಅಳತೆ ಮಾಡಬೇಕು. ಒತ್ತುವರಿ ಮಾಡಿಕೊಂಡ ಭೂಮಿಯನ್ನು ಕೂಡಲೇ ತೆರವುಗೊಳಿಸಬೇಕು. ಬೇಲಿ ಹಾಕಿ ಸಂರಕ್ಷಣೆ ಮಾಡಬೇಕು. ಈ ಭೂಗಳ್ಳರ ಹಿಂದೆ ರಾಜಕಾರಣಿಗಳ ಬೆಂಬಲ ಕೂಡ ಇದೆ. ಇದರ ಜತೆಗೆ ಅಧಿಕಾರಿಗಳು ಕೂಡ ಸೇರಿಕೊಂಡಿದ್ದಾರೆ. ಒತ್ತುವರಿಗೊಳಿಸಿದವರ ಮೇಲೆ ಕ್ರಮ ತೆಗೆದುಕೊಳ್ಳದ ಅಧಿಕಾರಿಗಳ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಕರ್ನಾಟಕ ಭೂಕಂದಾಯ ಕಾಯ್ದೆಯಡಿಯಲ್ಲಿ ವಿಶೇಷ ಕ್ರಮ ಕೈಗೊಂಡು ದೇವಸ್ಥಾನದ ಆಸ್ತಿಗಳು ಪರರ ಪಾಲಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಸಂಘಟನೆಯಿಂದ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ರಾಜ್ಯ ಗೆಳೆಯರ ಬಳಗದ ಅಧ್ಯಕ್ಷ ಎಂ.ಆರ್.ಅನಿಲ್‌ಕುಂಚಿ, ಜಿಲ್ಲಾಧ್ಯಕ್ಷ ಡಿ.ಪರಮೇಶ್ವರಪ್ಪ, ಪ್ರಮುಖರಾದ ಜಯಂತಿ, ವಿಜಯ್‌ಕುಮಾರ್, ರೂಪಾ, ಯುವರಾಜ್ ಬಿ.ಎಸ್.ರುದ್ರೋಜಿರಾವ್, ಪ್ರದೀಪ್, ರವಿ, ಆದರ್ಶ, ಆಯುಷಾ, ಹಸ್ಸಂ, ಶಾದಿಕ್ ಅಹಮ್ಮದ್, ಇಮ್ತಿಯಾಜ್, ರಾಜಕುಮಾರ್, ಅಸ್ಕರ್ ಪಾಷಾ ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net