

ಕೋಲಾರ: ಹದಗೆಟ್ಟ ರಸ್ತೆಗಳನ್ನು ದುರಸ್ತಿಪಡಿಸದ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಡಿ.16ಕ್ಕೆ ಕೋಲಾರ ಬಂದ್ಗೆ ಕರೆ ನೀಡಿವೆ.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಶ್ವತ ನೀರಾವರಿ ಹೋರಾಟ ಸಮಿತಿ ಸಂಚಾಲಕ ಹೊಳಲಿ ಪ್ರಕಾಶ್, ರಸ್ತೆಗಳು ಮೃತ್ಯುಕೂಪಗಳಾಗಿ ಮಾರ್ಪಟ್ಟಿದ್ದು, ಜಿಲ್ಲಾಡಳಿತ, ನಗರಸಭೆ, ಸರ್ಕಾರ ಕಣ್ಣುಮುಚ್ಚಿ ಕುಳಿತಿವೆ. ಮಳೆಗೆ ಹಾಳಾಗಿವೆ ಎಂದು ಹೇಳುತ್ತಿದ್ದರೂ, ಕಳಪೆ ಕಾಮಗಾರಿ ನಡೆಸಿರುವುದರಿಂದ ಇಂತಹ ದುಸ್ಥಿತಿ ಬಂದೊದಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ಸಂಸದ ಮುನಿಸ್ವಾಮಿ, ಶಾಸಕರು, ಪಿಡಬ್ಲೂಡಿ, ಜಿಪಂ ಇಂಜಿನಿಯರಿಂಗ್ ವಿಭಾಗ ಮತ್ತು ನಿರ್ವಹಣೆ ಮಾಡಬೇಕಿದ್ದ ಗುತ್ತಿಗೆದಾರರು ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಹೀಗಾಗಿ 60ಕ್ಕೂ ಹೆಚ್ಚು ಸಂಘ&ಸಂಸ್ಥೆಗಳ ಬೆಂಬಲದೊಂದಿಗೆ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದರು.
ರಸ್ತೆಗಳು ಹಾಳಾಗಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿಗಳು ಬರುತ್ತಿವೆ. ಆದರೆ ಕಣ್ಣು, ಕಿವಿಯಿಲ್ಲದ ಸರ್ಕಾರ ಇದಾವುದರ ಬಗ್ಗೆಯೂ ಗಮನಹರಿಸುತ್ತಿಲ್ಲ. ಜನಪ್ರತಿನಿಧಿಗಳಿಗೆ ಜಿಲ್ಲೆ ಅಭಿವೃದ್ಧಿ ಬೇಕಾಗಿಲ್ಲ. ಹೀಗಾಗಿ ಎಲ್ಲರ ಕಣ್ತೆರೆಸಲು ಅನಿವಾರ್ಯವಾಗಿ ಬಂದ್ಗೆ ಕರೆ ಕೊಡಲಾಗಿದೆ. ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಪ್ರತಿಯೊಬ್ಬರೂ ಧ್ವನಿಯೆತ್ತುವುದು ಒಳಿತು. ಎಲ್ಲೆಡೆಯಿಂದ ಬಂದ್ಗೆ ಬೆಂಬಲ ವ್ಯಕ್ತವಾಗುತ್ತಿದ್ದು, ಹಿಂದೆ ಸರಿಯುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು.
ವರ್ತಕರ ಸಂಘದ ಗೌರವಾಧ್ಯಕ್ಷ ಚಲಪತಿ ಮಾತನಾಡಿ, ನಗರದ ರಸ್ತೆಗಳಲ್ಲಿ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ಏಕಮುಖ ಸಂಚಾರ ಘೋಷಿಸುವುದಕ್ಕೂ ಮುನ್ನ ಸಮಾನಾಂತರ ರಸ್ತೆಗಳನ್ನು ಅಭಿವೃದ್ಧಿಪಡಿಸಲಿಲ್ಲ. ಅಂಗಡಿಗಳಿಗೆ ಸರಕುಗಳನ್ನು ತರಿಸಿಕೊಳ್ಳಲು ಆಗುತ್ತಿಲ್ಲ. ನಿತ್ಯ 100ರಿಂದ 200 ಗ್ರಾಂ ಧೂಳು ಸೇವಿಸಿ ವಿವಿಧ ಕಾಯಿಲೆಗಳಿಗೆ ಜನ ತುತ್ತಾಗುವಂತಾಗಿದೆ. ಇದರ ಜತೆ ಕಸ ರಸ್ತೆಗಳ ಮೇಲೆ ಬಂದು ರಸ್ತೆಗಳು ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿವೆ ಎಂದು ದೂರಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಸಂಚಾಲಕ ಕುರುಬರಪೇಟೆ ವೆಂಕಟೇಶ್ ಮಾತನಾಡಿ, ನಮ್ಮದು ರಾಜಕೀಯರಹಿತ ಹೋರಾಟವಾಗಿದ್ದು, ಜನಪ್ರತಿನಿಧಿಗಳು ರಸ್ತೆ, ಶುದ್ಧ ನೀರು ಬೀದಿದೀಪ, ಕಸವಿಲೇವಾರಿ ಸೇರಿ ಮೂಲಸೌಲಭ್ಯ ಒದಗಿಸಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಬೇಕು. ಅಧಿಕಾರಿಗಳು ಜನಪ್ರತಿನಿಧಿಗಳ ಕೈಗೊಂಬೆಯಾಗಿ ವರ್ತಿಸುವುದರ ಬದಲು ವರ್ಗಾವಣೆಯಾಗಲಿ. ರಸ್ತೆಗಳ ಅಭಿವೃದ್ಧಿಗೆ ಕೋಟಿ ಕೋಟಿ ಹಣ ಮಂಜೂರಾಗಿದೆ ಎಂದು ಹೇಳಲಾಗುತ್ತಿದ್ದರೂ, ಒಂದು ಹಿಡಿ ಮಣ್ಣು ಹಾಕಲು ಸಾಧ್ಯವಾಗದಿದ್ದರೆ ಇಂತಹ ಆಡಳಿತ ಏಕಿರಬೇಕು ಎಂದು ಪ್ರಶ್ನಿಸಿದರು.
ಬೆಂಬಲ: ರೈತ, ವರ್ತಕ, ಕಾರ್ಮಿಕ, ವಿದ್ಯಾರ್ಥಿ, ಮಹಿಳೆ, ಆಟೋ, ಟೆಂಪೋ, ಬಸ್, ಲಾರಿ ಮಾಲೀಕರು, ಚಾಲಕರ ಸಂಘಟನೆಗಳು ಸೇರಿ 60ಕ್ಕೂ ಹೆಚ್ಚು ಸಂಘಟನೆಗಳ ಸಹಕಾರದೊಂದಿಗೆ ಬಂದ್ ಯಶಸ್ವಿಗೊಳ್ಳಲಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಸಂಚಾಲಕ ಹೊಳಲಿ ಪ್ರಕಾಶ್ ವಿಶ್ವಾಸ ವ್ಯಕ್ತಪಡಿಸಿದರು. ರೈತಸಂಘ ಉಪಾಧ್ಯಕ್ಷ ನಾರಾಯಣಗೌಡ, ವರ್ತಕರ ಸಂಘದ ಸದಸ್ಯ ಡಿ.ಜೆ.ಮನೋಹರ್, ವಕೀಲ ಸತೀಶ್ಸೊಣ್ಣಪ್ಪ, ರೈತಸಂಘ (ಪ್ರೊ.ಎಂಡಿಎನ್ ಬಣ) ಜಿಲ್ಲಾಧ್ಯಕ್ಷ ಕಲ್ಪಮಂಜಲಿ ರಾಮು ಶಿವಣ್ಣ, ಹೋಟೆಲ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ರಾಧಾಕೃಷ್ಣ, ಕದಂಬ ಸೋಮಣ್ಣ, ಟಿಪ್ಪು ಸೆಕ್ಯೂಲರ್ ಸೇನೆಯ ಆಸೀಫ್, ದಲಿತ ನಾರಾಯಣಸ್ವಾಮಿ, ಆಲ್ಪಸಂಖ್ಯಾತರ ಸಂಘಟನೆಯ ಇಮ್ರಾನ್, ನವಾಜ್, ಕರವೇ ಜಿಲ್ಲಾಧ್ಯಕ್ಷ ಮೇಡಾಳ ರಾಘವೆಂದ್ರ, ಮುಖಂಡರಾದ ದಿಂಬ ನಾಗರಾಜು, ಗೋಪಾಲಗೌಡ, ರೈತ ಮುಖಂಡ ನಾರಾಯಣಸ್ವಾಮಿ ಇತರರು ಇದ್ದರು.
ಅಭಿವೃದ್ಧಿ ಕಣ್ಣಿಗೆ ಕಾಣಲ್ವಾ?
ನಗರದ ಕ್ಲಾಕ್ಟವರ್ನಿಂದ ಬಂಗಾರಪೇಟೆ ವೃತ್ತ, ಮೆಕ್ಕೇ ವೃತ್ತ, ಹೊಸಬಸ್ ನಿಲ್ದಾಣ ರಸ್ತೆ ಅಭಿವೃದ್ಧಿ ಯಾರಕಾಲದಲ್ಲಾಗಿದೆ?. ಇದೆಲ್ಲ ಹೋರಾಟಗಾರರು, ಪ್ರಗತಿಪರ ಸಂಘಟನೆಗಳ ಕಣ್ಣಿಗೆ ಕಾಣಲ್ವಾ ಎಂದು ಸಂಸದ ಎಸ್.ಮುನಿಸ್ವಾಮಿ ಕೋಲಾರ ಬಂದ್ಗೆ ಕರೆ ನೀಡಿರುವ ಸಂಘಟನೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೋರಾಟ ಮಾಡುವುದಕ್ಕೆ ಅಡ್ಡಿಯಿಲ್ಲ. ರಸ್ತೆಗಳ ಅಭಿವೃದ್ಧಿಗೆ ಪ್ರತಿತಾಲೂಕಿಗೆ 20ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ. ನಗರೋತ್ಥಾನ ಸೇರಿ ಹಲವು ಯೋಜನೆಗಳಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳಾಗಿವೆ. ಸಂಘಟನೆಗಳ ಬಂಡವಾಳ ಗೊತ್ತಿದೆ, ಕೆಲವು ಒಳ್ಳೆಯ ಮಾರ್ಗದಲ್ಲಿ ನಡೆಯುತ್ತಿರುವ ಸಂಘಟನೆಗಳೂ ಇವೆ. ಇವರೆಲ್ಲ ಹೋರಾಟ ಮಾಡಲಿ, ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದರು.