

ಬನ್ನೂರು: ಕರ್ನಾಟಕ ರಾಜ್ಯ ರೈತ ಸಂಘದ (ಮೂಲಸಂಘಟನೆ) ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಕುತ್ತಿಗೆಗೆ ಹಗ್ಗ ಬಿಗಿದುಕೊಂಡು ಅರೆ ಬೆತ್ತಲೆಯಲ್ಲಿ ಸಂತೇಮಾಳದ ಬಸವೇಶ್ವರ ವೃತ್ತದ ಮೈಸೂರು-ಮಳವಳ್ಳಿ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ತಡೆದು ಶುಕ್ರವಾರ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ರೈತರನ್ನು ನಡು ರಸ್ತೆಯಲ್ಲಿಯೇ ನೇಣು ಹಾಕಿಕೊಳ್ಳುವಂತೆ ಮಾಡುವ ಮೂಲಕ ರೈತ ವಿರೋಧಿ ನೀತಿಗೆ ನಾಂದಿ ಹಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಜಿಲ್ಲಾಧ್ಯಕ್ಷ ನಾರಾಯಣ್ ಮಾತನಾಡಿ, ಮುಖ್ಯಮಂತ್ರಿ ಕೂಡಲೇ ಸರ್ವಪಕ್ಷಗಳ ಸಭೆ ಕರೆದು ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂಬ ಸಂಗತಿಯನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು. ತಮಿಳುನಾಡಿಗೆ ಹೀಗೆ ನೀರನ್ನು ಬಿಟ್ಟರೆ ಇಲ್ಲಿನ ಜನರು, ಜಾನುವಾರುಗಳ ಗತಿ ಏನಾಗಬೇಕು? ಯಾವುದೇ ಕಾರಣಕ್ಕೂ ನೀರನ್ನು ಬಿಡಲು ಸಾಧ್ಯವಿಲ್ಲ ಎಂಬ ದೃಢನಿರ್ಧಾರ ಕೈಗೊಂಡು ರೈತಾಪಿ ವರ್ಗದ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.
ಸಮಾಜ ಸೇವಕ ವೈ.ಎಸ್. ರಾಮಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡುವ ಮೂಲಕ ಅಲ್ಲಿನ ರೈತರ ಹಿತ ಕಾಪಾಡಲು ಮುಂದಾಗಿದೆ. ಕಾಂಗ್ರೆಸ್ ಸರ್ಕಾರದ ಈ ಕ್ರಮವನ್ನು ಜನರು ಎಂದಿಗೂ ಸಹಿಸುವುದಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ರೈತರು ಬಾರುಕೋಲಿನಿಂದ ಹೊಡೆದು ಬುದ್ಧಿ ಕಲಿಸುವ ಕೆಲಸ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಸವೇಶ್ವರ ವೃತ್ತದಿಂದ ಅರೆಬೆತ್ತಲೆ ಪಾದಯಾತ್ರೆ ತೆರಳಿ ಕಾವೇರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ಅಸದ್, ದಿಲೀಪ್, ಯೂಸಫ್, ಸತೀಶ್‌ನಾಯ್ಕ, ಜಯರಾಂ, ಚಿನ್ನಸ್ವಾಮಿ, ಪಾರ್ಥ, ಬೆಟ್ಟಹಳ್ಳಿ ಶಿವರಾಂ, ಬೀಡನಹಳ್ಳಿ ವೆಂಕಟೇಶ್, ಕುಮಾರ, ಗೋಪಿ, ವರ್ತಕರ ಸಂಘದ ಅಧ್ಯಕ್ಷ ಕೃಷ್ಣ, ಸಮಾಜ ಸೇವಕ ಮಹೇಂದ್ರಸಿಂಗ್ ಕಾಳಪ್ಪ, ರಾಜೇಶ್‌ಸಿಂಗ್, ಮಲಿಯೂರು ರಾಜಣ್ಣ, ಮಾಣಿಕ್ ಚಂದ್, ಅಶೋಕ್, ಅತ್ತಹಳ್ಳಿ ಸ್ವಾಮಿ, ಶಾಂತರಾಜು, ಮಾರವಾಡಿ, ವರ್ತಕ ಸಂಘದ ಮುಖಂಡರು, ವಿವಿಧ ಸಂಘಟನೆ ಮುಖಂಡರು ಇದ್ದರು.