

ಮೈಸೂರು: ಬೆಂಗಳೂರಿನ ಜಿ.ಟಿ. ಮಾಲ್‌ಗೆ ಪಂಚೆ ಉಟ್ಟು ತೆರಳಿದ್ದ ರೈತರೊಬ್ಬರಿಗೆ ಪ್ರವೇಶ ನಿರಾಕರಿಸಿದ್ದನ್ನು ಖಂಡಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪೊರಕೆ ಚಳವಳಿ ನಡೆಯಿತು.
ಪಂಚೆ ಉಟ್ಟಿದ್ದಾರೆ ಎಂಬ ಏಕೈಕ ಕಾರಣಕ್ಕೆ ರೈತರಿಗೆ ಪ್ರವೇಶ ನಿರಾಕರಿಸಿರುವುದು ಖಂಡನೀಯ. ರೈತ ಈ ದೇಶದ ಬೆನ್ನುಲುಬು. ರೈತಾಪಿ ವರ್ಗದವರು ದುಡಿದರೆ ಮಾತ್ರ ದೇಶ ಸುಭಿಕ್ಷೆಯಿಂದ ಇರಲು ಸಾಧ್ಯ. ದೇಶ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ರೈತರ ಪರಿಶ್ರಮ ಕಾರಣ. ಆದರೆ, ಇಂತಹ ರೈತಾಪಿ ವರ್ಗಕ್ಕೆ ಮಾಲ್‌ನವರು ಅವಮಾನ ಮಾಡಿರುವುದು ಖಂಡನೀಯ. ಕೂಡಲೇ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಒತ್ತಾಯಿಸಿದರು.
ಪ್ರಧಾನಿಯಿಂದ ಮುಖ್ಯಮಂತ್ರಿಯವರಿಗೆ ಹಲವಾರು ರಾಜಕೀಯ ನೇತಾರರು ಪಂಚೆ ಉಡುತ್ತಾರೆ. ಪಂಚೆ ಉಟ್ಟವರಿಗೆ ಪ್ರವೇಶವಿಲ್ಲ ಎಂದಾದರೆ ಇವರೆಲ್ಲರಿಗೂ ಮಾಡಿದ ಅವಮಾನವಾಗಿದೆ. ಬಂಡವಾಳ ಶಾಹಿಗಳು ಮತ್ತು ರಾಜಕಾರಣಿಗಳು ಪಂಚೆ ಉಟ್ಟು ಬಂದರೆ ಯವುದೇ ತಕರಾರರು ಮಾಡದ ಇವರು ರೈತಾಪಿ ವರ್ಗದವರು ಮಾತ್ರ ಪಂಚೆ ಉಟ್ಟು ಬಂದರೆ ಪ್ರವೇಶ ನಿರಾಕರಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಕೆರೆಹುಂಡಿ ರಾಜಣ್ಣ, ಅಂಕನಹಳ್ಳಿ ತಿಮ್ಮಪ್ಪ, ಅತ್ತಹಳ್ಳಿ ಸೌಮ್ಯರಾಜ್, ಹಾಡ್ಯ ರವಿ, ಹಾಲಿನ ನಾಗರಾಜ್, ಮಲೆಯೂರು ಹರ್ಷ, ಅರಳಿಕಟ್ಟೆ ಕುಮಾರ್, ಉಡಿಗಾಲ ರಾಜಶೇಖರಪ್ಪ, ಗುರುವಿನಪುರ ಮೋಹನ್, ಆನಂದ ಮಲೆಮಾದಪ್ಪ, ಕಸುನಹಳ್ಳಿ ಮಂಜೇಶ್ ಹಾಗೂ ಇತರರು ಪಾಲ್ಗೊಂಡಿದ್ದರು.